ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರ (ಫೆಮಾ) ಸೆಕ್ಷನ್ 37(ಎ) ರ ಸಿಂಧುತ್ವ ಎತ್ತಿ ಹಿಡಿಯುವ ಮೂಲಕ ಶಿಯೋಮಿ ತಂತ್ರಜ್ಞಾನ ಸಂಸ್ಥೆಗೆ ಸೇರಿದ 5551.27 ಕೋಟಿ ರೂಪಾಯಿ ಜಪ್ತಿ ಮಾಡಿದ್ದ ಜಾರಿ ನಿರ್ದೇಶನಾಲಯದ ಕ್ರಮವನ್ನು ಊರ್ಜಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಹೈಕೋರ್ಟ್‌ನ ವಿಭಾಗೀಯ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಶಿಯೋಮಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅಲ್ಲದೇ, ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು? 2022ರ ಏಪ್ರಿಲ್ 29ರಂದು ಶಿಯೋಮಿ ಕಂಪನಿಗೆ ಸೇರಿದ್ದ 5551.27 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ಫೆಮಾ ಕಾಯ್ದೆಯ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡಿತ್ತು. ಅಲ್ಲದೆ, ಅರ್ಜಿದಾರ ಕಂಪೆನಿಯು ಭಾರತದಿಂದ ಹೊರ ಭಾಗದಲ್ಲಿರುವ ವಿದೇಶಿ ಕಂಪೆನಿಯಾದ ಕ್ವಾಲ್ಕಾಮ್‌ಗೆ ರಾಯಧನದ ರೂಪದಲ್ಲಿ ಪಾವತಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಣ ವಶಪಡಿಸಿಕೊಳ್ಳುತ್ತಿರುವುದಾಗಿ ಜಾರಿ ನಿರ್ದೇಶನಾಲಯ ಕಂಪೆನಿಗೆ ತಿಳಿಸಿತ್ತು. ಬೃಹತ್ ಮೊತ್ತದ ವರ್ಗಾವಣೆ ಸಂಬಂಧ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ, ಯಾವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಕಂಪನಿ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ಇಡೀ ಮೊತ ವಶಕ್ಕೆ ಪಡೆದಿರುವುದಾಗಿ ಆದೇಶಿಸಿತ್ತು. ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದ ಶಿಯೋಮಿ, ಫೆಮಾ ಕಾಯ್ದೆ ಸೆಕ್ಷನ್ 37ಎ ಸಿಂಧುತ್ವ ಪ್ರಶ್ನಿಸಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿದೇಶಿ ವಿನಿಯಮ ಕಾಯ್ದೆ ಸೆಕ್ಷನ್ 37ಎ ಸಂವಿಧಾನದ ಪರಿಚ್ಛೇದ 14(ಸಮಾನತೆ) ಹಕ್ಕಿಗೆ ವಿರುದ್ಧವಾಗಿದೆ. ಈ ಸೆಕ್ಷನ್ ಪ್ರಕಾರ ಅನುಮಾನದಿಂದ ವಶಪಡಿಸಿಕೊಳ್ಳುವ ಕ್ರಮವನ್ನು ಎತ್ತಿಹಿಡಿಯುವಂತಿದೆ. ಹೀಗಾಗಿ ಸೆಕ್ಷನ್ 37ಎಯನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ಕೋರಿದ್ದರು.
ಈ ಸಂಬಂಧ ಏಕಸದಸ್ಯ ಪೀಠದ ಮುಂದೆ ಕೇಂದ್ರ ಸರ್ಕಾರದ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸೇಟರ್ ಜನರಲ್, ದೇಶದಲ್ಲಿನ ಕಪ್ಪು ಹಣ ವ್ಯಾಪಾರದ ರೂಪದಲ್ಲಿ ವಿದೇಶಗಳನ್ನು ಸೇರುವುದನ್ನು ತಡೆಯುವುದಕ್ಕಾಗಿ ಫೆಮಾ ಕಾಯ್ದೆಗೆ 2015ರಲ್ಲಿ ತಿದ್ದುಪಡಿ ತಂದು ಸೆಕ್ಷನ್ 37ಎ ಯನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಇದು ಸಾಂವಿಧಾನಿಕ ಸಿಂಧುತ್ವವನ್ನು ಹೊಂದಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.
ವಾದ ಆಲಿಸಿದ್ದ ನ್ಯಾಯ ಪೀಠ, ಫೆಮಾ ಕಾಯ್ದೆ ಸೆಕ್ಷನ್ 37ಎ ಯಾವುದೇ ರೀತಿಯಲ್ಲಿಯೂ ನಿಯಮಗಳಗೆ ವಿರುದ್ಧವಾಗಿಲ್ಲ. ಜೊತೆಗೆ, ಸಂವಿಧಾನದ ಯಾವುದೇ ವಿಧಿಗೆ ವಿರುದ್ಧವಾಗಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಇದೀಗ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ: High court news: ಖಾಲಿ ಇರುವ ಸರ್ಕಾರಿ ಪಿಪಿ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ: ಸರ್ಕಾರ