ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ವಕೀಲರ ಭವನ ನಿರ್ಮಾಣ ಪ್ರಸ್ತಾವನೆ ಅನುಮೋದನೆಗಾಗಿ ಪ್ರಸಕ್ತ ಆಯವ್ಯಯ ಪಟ್ಟಿಗೆ ಸೇರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ವಕೀಲರ ಭವನ ನಿರ್ಮಾಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾಗರ ವಕೀಲರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು.
ಈ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ ವಕೀಲರ ಭವನ ನಿರ್ಮಾಣ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಪ್ರಸಕ್ತ ಆಯವ್ಯಯ ಪಟ್ಟಿಗೆ ಸೇರಿಸಲಾಗಿದೆ. ಅನುಮೋದನೆ ದೊರೆತ ನಂತರ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಏ.01ಕ್ಕೆ ಮುಂದೂಡಿತು.
ಓದಿ: ರಾಸಲೀಲೆ ಪ್ರಕರಣ: ದಿನೇಶ್ ಕಲ್ಲಹಳ್ಳಿ ನಿವಾಸಕ್ಕೆ ಪೊಲೀಸ್ ಭದ್ರತೆ
ಪ್ರಕರಣದ ಹಿನ್ನೆಲೆ: ಸಾಗರ ಕೋರ್ಟ್‌ಗೆ ಹೊಂದಿಕೊಂಡಿರುವ ಪೊಲೀಸ್ ವಸತಿ ಗೃಹಗಳು ಸದ್ಯ ಪಾಳು ಬಿದ್ದಿವೆ. ಅಲ್ಲಿನ 118x85 ಅಡಿ ವಿಸ್ತೀರ್ಣದ ಜಾಗವನ್ನು ಸಾಗರ ವಕೀಲರ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕೋರಲಾಗಿದೆ. ಈ ಸಂಬಂಧ ಐದು ವರ್ಷಗಳಿಂದ ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ನಡುವೆ ಪತ್ರ ವ್ಯವಹಾರ ನಡೆಯುತ್ತಿದೆ. ಆದರೆ ಜಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಲು ಜಾಗದ ಮೌಲ್ಯವಾಗಿ ಒಂದು ಕೋಟಿ ರೂ. ನೀಡುವಂತೆ ಲೋಕೋಪಯೋಗಿ ಇಲಾಖೆ ಹೇಳಿದೆ. ಈ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿರುವ ಸಂಘ, ಸರ್ಕಾರದ ವೆಚ್ಚದಲ್ಲೇ ವಕೀಲರ ಭವನ ನಿರ್ಮಿಸಿ ಕೊಡಲು ಲೋಕೋಪಯೋಗಿ ಇಲಾಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದೆ.