ಬೆಂಗಳೂರು : ಕಾರಣಾಂತರಗಳಿಂದ ಜೈಲು ಸೇರಿರುವ ಅಪರಾಧಿಯ ಮಗನ ಮದುವೆಯಾಗುತ್ತಿದ್ದು, ತಂದೆ ಹಾಜರಾಗುವುದು ಮಕ್ಕಳ ಬಯಕೆಯಾಗಿರುತ್ತದೆ. ಇದು ಸಂವಿಧಾನದ ಪರಿಚ್ಛೇದ 21ರ ಪ್ರಕಾರ ಮಾನವೀಯ ಗುಣಗಳಡಿ ಪರಿಗಣನೆಗೆ ಒಳಪಡಲಿದೆ ಎಂದು ತಿಳಿಸಿರುವ ಹೈಕೋರ್ಟ್, ಅಪರಾಧಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತನ್ನ ಮದುವೆಗೆ ತಂದೆ ಹಾಜರಿ ಆಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಮದುವೆಗಾಗಿ 30 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ತುಮಕೂರಿನ ಅಬ್ದುಲ್ ರೆಹಮಾನ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಜೈಲಿನಲ್ಲಿರುವ ಅರ್ಜಿದಾರರ ತಂದೆ ಅಮ್ಜದ್ ಪಾಷಾ ಅವರಿಗೆ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಸೆಪ್ಟಂಬರ್ 2ರಿಂದ ಏಳು ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಅಲ್ಲದೆ, ಅರ್ಜಿದಾರರ ಮದುವೆ ಸೆಪ್ಟಂಬರ್ 3(ಭಾನುವಾರ) ನಿಗದಿಯಾಗಿದೆ. ಈ ಕುರಿತು ಆಮಂತ್ರಣ ಪತ್ರವನ್ನು ಒದಗಿಸಿದ್ದಾರೆ. ಅಲ್ಲದೆ, ಸಾಮಾನ್ಯವಾಗಿ ಪ್ರತಿ ಮುಸ್ಲಿಂ ವಿವಾಹವು ಪೋಷಕರ ಭಾಗವಹಿಸುವಿಕೆಯೊಂದಿಗೆ ಕೆಲವು ಆಚರಣೆಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ಚಿಕ್ಕ ಮಗ ಮದುವೆಯಾಗುವಾಗ, ಅವರ ತಂದೆಯ ಉಪಸ್ಥಿತಿಯ ನಿರೀಕ್ಷೆಯಿರಲಿದೆ. ಆದ್ದರಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಸೂಚಿಸಿದೆ.
ಒಬ್ಬ ವ್ಯಕ್ತಿಯನ್ನು ಅಪರಾಧಿಯೆಂದು ನಿರ್ಣಯಿಸಿ ಜೈಲಿನಲ್ಲಿ ಹಾಕಿದ ಬಳಿಕ ಅವನನ್ನು ಎಲ್ಲಾ ಸ್ವಾತಂತ್ರ್ಯ ಮತ್ತು ಘನತೆಯ ನಿರ್ಗತಿಕನನ್ನಾಗಿ ಮಾಡಲು ಸಾಧ್ಯವಿಲ್ಲ. ಜೊತೆಗೆ, ಶಿಕ್ಷೆಯ ಅವಧಿ ಪೂರ್ಣಗೊಳಿಸಿದ ಬಳಿಕ ಜೈಲಿನಿಂದ ಮನೆಗೆ ಹಿಂದಿರುಗಿದಾಗ, ಅವನು ಸಂಪೂರ್ಣವಾಗಿ ಅಪರಿಚಿತನಾಗಿರಬಹುದು ಮತ್ತು ಅವನಿಗೆ ಜೀವನವು ಕಷ್ಟಕರವಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಅಪರಾಧಿಯಾದವರು ಸಾಂದರ್ಭಿಕವಾಗಿಯಾದರೂ ನಾಗರಿಕ ಸಮಾಜದೊಂದಿಗೆ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಅವನು ಜೈಲಿನಲ್ಲಿರುವ ಸಂದರ್ಭದಲ್ಲಿ ಸಂಬಂಧಗಳನ್ನು ಕಳೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಪೆರೋಲ್ ನಿಯಮಗಳು ಮಾನವೀಯ ಗುಣಗಳ ಆಧಾರದ ಮೇಲೆ ರಚನೆ ಮಾಡಲಾಗಿದ್ದು, ದೀರ್ಘ ಕಾಲದವರೆಗೆ ಜೈಲಿನಲ್ಲಿ ಇರಿಸಲ್ಪಟ್ಟವರನ್ನು ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ನಾಗರಿಕ ಸಮಾಜದೊಂದಿಗೆ ಅವನ ಸಂಪರ್ಕವನ್ನು ಕಾಪಾಡಿಕೊಳ್ಳುವುದಕ್ಕೆ ನೀಡುವುದೇ ಪೆರೋಲ್ನ ಮುಖ್ಯ ಉದ್ದೇಶವಾಗಿದೆ ಎಂದಿದೆ.
ಸಂಗಾತಿಯ ಮತ್ತು ಮಕ್ಕಳ ನಿರೀಕ್ಷೆಗಳು ಜೈಲಿನ ಗೋಡೆಗಳನ್ನು ವ್ಯಾಪಿಸಲಿದ್ದು, ಅಪರಾಧಿಯನ್ನು ಕಾಡಲಿದೆ. ಮಕ್ಕಳ ವಿವಾಹಕ್ಕೆ ಅವಕಾಶ ನೀಡದಿದ್ದರೆ ನ್ಯಾಯಾಲಯದ ನಿರ್ಧಾರ ಅಮಾನವೀಯ ಎಂಬ ಬ್ಯಾಂಡ್ಗೆ ಪಾತ್ರವಾಗುವ ಅಪಾಯವಿರಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಜಾಮೀನು ನಿರಾಕರಿಸುವ ಬದಲು ಮಂಜೂರು ಮಾಡಿ ತನಿಖೆಗೆ ಸಹಕರಿಸಲು ಷರತ್ತು ವಿಧಿಸುವುದು ಸೂಕ್ತ: ಹೈಕೋರ್ಟ್