ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆಂಬ್ಯುಲೆನ್ಸ್ಗಳ ಸೇವೆ ಜಾರಿಗೆ ಬರುವವರೆಗೆ ವಾಹನ ದಟ್ಟಣೆ ಸಮಸ್ಯೆ ಎದುರಿಸುತ್ತಿರುವ ಆಂಬ್ಯುಲೆನ್ಸ್ ಗಳ ನಿರ್ವಹಣೆಗೆ ಸರಳ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಸಂಚಾರ ದಟ್ಟಣೆಯಿಂದ ವಿಳಂಬವಾಗುತ್ತಿರುವ ಹಾಗೂ ಆಧುನಿಕ ಉಪಕರಣಗಳ ಕೊರತೆಯಿಂದ ಹಿಂದುಳಿದಿರುವ ಆಂಬ್ಯುಲೆನ್ಸ್ ಸೇವೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಣಗೊಳಿಸುವಂತೆ ಕೋರಿ ನಗರದ ಭಾರತ ಪುನರುತ್ಥಾನ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಕುರಿತು ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಮತ್ತು ಸುಧಾರಿತ ಆಂಬ್ಯುಲೆನ್ಸ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರ ಸಿದ್ಧತೆ ಮಾಡುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿದ್ದಪಡಿಸಿರುವ ಪ್ರಸ್ತಾಪವನ್ನು ಹಣಕಾಸು ಇಲಾಖೆಯ ಅನುಮೋದನೆ ಪಡೆದುಕೊಂಡು ಜಾರಿಗೆ ತರುತ್ತಿದೆ ಎಂದು ವಿವರಿಸಿದರು.
ವಿವರಣೆ ಆಲಿಸಿದ ಪೀಠ ಉದ್ದೇಶಿತ ಯೋಜನೆ ಜಾರಿ ಮಾಡಿ. ಆದರೆ ಯೋಜನೆ ಇನ್ನೂ ಟೆಂಡರ್ ಹಂತವನ್ನೂ ತಲುಪಿಲ್ಲವಾದ್ದರಿಂದ ನಿರೀಕ್ಷಿತ ಸೇವೆ ಲಭ್ಯವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿವರೆಗೂ ಈಗಿರುವಂತೆಯೇ ಆ್ಯಂಬುಲೆನ್ಸ್ ಸೇವೆಯನ್ನು ನೀಡುವುದು ಸೂಕ್ತವೆನ್ನಿಸುವುದಿಲ್ಲ. ಆದ್ದರಿಂದ ಆ್ಯಂಬುಲೆನ್ಸ್ ಸಂಚಾರಕ್ಕೆ ವಾಹನ ದಟ್ಟಣೆಯಾಗದಂತೆ ಹಾಗೂ ಸುಧಾರಿತ ಸೇವೆ ಲಭ್ಯವಾಗುವಂತೆ ಸರಳ ಉಪಾಯವನ್ನು ಸಾಧ್ಯವಾದಷ್ಟು ಬೇಗ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.