ಬೆಂಗಳೂರು: ಲಾಕ್ಡೌನ್ನಿಂದಾಗಿ ಕೋರ್ಟ್ಗಳು ಸ್ಥಗಿತಗೊಂಡು ಕಳೆದೆರಡು ತಿಂಗಳಿಂದ ಸಂಪಾದನೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರು, ಕ್ಲರ್ಕ್‍ಗಳಿಗೆ ಆರ್ಥಿಕ ನೆರವು ನೀಡಲು ಹಣ ಸಂಗ್ರಹಿಸಿ ಕೊಡುವಂತೆ ಬೆಂಗಳೂರು ವಕೀಲರ ಸಂಘಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಈ ವಿಚಾರವಾಗಿ ಕರ್ನಾಟಕ ರಾಜ್ಯ ವಕೀಲರು, ಕ್ಲರ್ಕ್‍ಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಮೂರ್ತಿ ಎಸ್. ನಾಯಕ್ ವಾದ ಮಂಡಿಸಿ ಸಂಕಷ್ಟದಲ್ಲಿರುವ ಕ್ಲರ್ಕ್ ಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘಗಳಿಗೆ ಸೂಚಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಂಕಷ್ಟದಲ್ಲಿರುವ ಕ್ಲರ್ಕ್‍ಗಳಿಗೆ ಆರ್ಥಿಕ ನೆರವು ನೀಡಲು, ಗುಮಾಸ್ತರ ಸಂಘಕ್ಕೆ ಹಣ ಸಂಗ್ರಹಿಸಿ ಕೊಡುವಂತೆ ಹಾಗೂ ಹಣ ಸಂಗ್ರಹಿಸಲು ಸಹಾಯ ಮಾಡುವಂತೆ ಬೆಂಗಳೂರು ವಕೀಲರ ಸಂಘಕ್ಕೆ ಸೂಚನೆ ನೀಡಿತು.
ಕ್ಲರ್ಕ್‍ಗಳ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಹಾಗೂ ಅವರಿಗೆ ತುರ್ತು ಪರಿಹಾರ ನೀಡುವ ಸಂಬಂಧ ಸರ್ಕಾರ ತನ್ನ ನಿಲುವವನ್ನು ಸ್ಪಷ್ಟಪಡಿಸುವಂತೆ ತಾಕೀತು ಮಾಡಿ ವಿಚಾರಣೆಯನ್ನು ಜೂ. 2ಕ್ಕೆ ಮುಂದೂಡಿದರು.