ಬೆಂಗಳೂರು: ಸಾಗರ ನಗರದಲ್ಲಿರುವ ಕೆರೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಸರ್ವೆ ನಡೆಸಿ ವರದಿ ನೀಡುವಂತೆ ಸ್ಥಳೀಯ ತಹಶೀಲ್ದಾರ್ಗೆ ನಿರ್ದೇಶಿಸಿದೆ. ಅಲ್ಲದೇ, ಒತ್ತುವರಿ ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಜರುಗಿಸುವಂತೆಯೂ ಸೂಚಿಸಿದೆ.
ಈ ಕುರಿತು ಸ್ಥಳೀಯ ನಿವಾಸಗಳಾದ ಕಿರಣ್ ಗೌಡ ಹಾಗೂ ಮಹೇಶ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ತಹಶೀಲ್ದಾರ್ ಸರ್ವೆ ಅಧಿಕಾರಿಗಳ ಮೂಲಕ ಇಡೀ ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಭೂಮಿ ಎಷ್ಟು ಎಂಬುದನ್ನು ಗುರುತಿಸಬೇಕು. ಒಂದು ವೇಳೆ ಅರ್ಜಿದಾರರು ಹೇಳಿರುವಂತೆ ಒತ್ತುವರಿಯಾಗಿದ್ದಲ್ಲಿ, ನಿಯಮಾನುಸಾರ ಕ್ರಮ ಜರುಗಿಸಿ ಒತ್ತುವರಿ ತೆರವು ಮಾಡಿ, ಆ ಕುರಿತ ವರದಿಯನ್ನು ನವೆಂಬರ್ 11ರೊಳಗೆ ಸಲ್ಲಿಸಬೇಕು ಎಂದು ಪೀಠ ತನ್ನ ನಿರ್ದೇಶನದಲ್ಲಿ ತಿಳಿಸಿದೆ.
ಸಾಗರ ನಗರದ ಮಧ್ಯ ಭಾಗದಲ್ಲಿರುವ ಗಣಪತಿ ಕೆರೆಯಲ್ಲಿ ಹೂಳು ತುಂಬಿದ್ದು ನಿಧಾನವಾಗಿ ಮುಚ್ಚಿಕೊಳ್ಳುತ್ತಿದೆ. ಇದೇ ವೇಳೆ ಕೆಲ ಸ್ಥಳೀಯ ಪ್ರಭಾವಿಗಳು ಕೆರೆಗೆ ಸೇರಿದ ಜಾಗವನ್ನು ಅಲ್ಲಲ್ಲಿ ಒತ್ತುವರಿ ಮಾಡಿದ್ದಾರೆ. ಕೆರೆ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮ ಜರುಗಿಸಿಲ್ಲ. ಆದ್ದರಿಂದ ಕೆರೆ ಒತ್ತುವರಿ ತೆರವು ಮಾಡುವಂತೆ ಹಾಗೂ ಸಂರಕ್ಷಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.