ಬೆಂಗಳೂರು: ಜಾತಿ ನಿಂದನೆ ಆರೋಪದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ನಗರದ ಅಪಾರ್ಟ್ಮೆಂಟ್‌ವೊಂದರ ನಿವಾಸಿಗಳ ಸಂಘದ ಪದಾಧಿಕಾರಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರು ನಗರದ ಕೈಲಾಶ್ ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ ಕಣ್ಣೂರು, ಸಂಘದ ಕಾರ್ಯದರ್ಶಿ ರಾಮಲಿಂಗಯ್ಯ ಮತ್ತು ಅಪಾರ್ಟ್ಮೆಂಟ್ ನಿವಾಸಿಯಾಗಿರುವ ಬಿ.ಎನ್. ಅಭಿಷೇಕ್ ಅವರ ವಿರುದ್ಧದ ಅದೇ ಅಪಾರ್ಟ್ಮೆಂಟ್ ನಿವಾಸಿಯಾಗಿರುವ ಕೆ.ಎಸ್ ರವಿಕುಮಾರ್ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ಆಧಾರದಲ್ಲಿ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಪ್ರಕರಣವನ್ನು ರದ್ದು ಕೋರಿ ಸಂಘದ ಅಧ್ಯಕ್ಷ ಅರುಣ ಕಣ್ಣೂರು ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ.ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಖಾಸಗಿ ದೂರು ಮತ್ತು ಕೆಂಗೇರಿ ಪೊಲೀಸ್ ಠಾಣೆಯಲ್ಲಿನ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಸಕಾರಣವಿಲ್ಲದೆ ದೂರು ದಾಖಲಿಸಿರುವ ರವಿಕುಮಾರ್ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಜೊತೆಗೆ, ಇದೊಂದು ಕಾನೂನು ದುರ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಸುಳ್ಳು ದೂರು ದಾಖಲಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿಯೂ ದೌರ್ಜನ್ಯಕ್ಕೆ ತುತ್ತಾದವರಿಗೆ ಈ ಕಾಯ್ದೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಸ್ವತಃ ರವಿಕುಮಾರ್ ವಾದ ಮಂಡಿಸಿ, ಕೈಲಾಶ್ ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ಧಿ ಸಂಘದ ನಿರ್ಧಾರದಿಂದ ತಮ್ಮ ಪತ್ನಿ ಮಾನಸಿಕವಾಗಿ ತೊಂದರೆ ಅನುಭವಿಸಿದ್ದಾರೆ. ಅಲ್ಲದೆ, ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆಗಳಿಗೆ ತಯಾರಾಗಲು ತೊಂದರೆಯಾಗಿತ್ತು. ಜೊತೆಗೆ ಪಿಹೆಚ್‌ಡಿ ಅಧ್ಯಯನಕ್ಕೆ ಲ್ಯಾಪ್‌ಟಾಪ್ ಬಳಕೆಗೆ ಸಾಧ್ಯವಾಗಿರಲಿಲ್ಲ ಎಂದು ವಿವರಿಸಿದ್ದರು. ಅಲ್ಲದೆ, ನಿರ್ವಹಣಾ ಶುಲ್ಕ ಪಾವತಿಸಿರಲಿಲ್ಲ ಎಂದು ಒಪ್ಪಿಕೊಂಡಿದ್ದರು.
ಪ್ರಕರಣದ ಹಿನ್ನೆಲೆ: ನಗರದ ಮೈಸೂರು ರಸ್ತೆಯ ಕೈಲಾಶ್ ಅಪಾರ್ಟ್ಮೆಂಟ್ ನಿವಾಸಿಯಾರುವ ದೂರುದಾರ ರವಿಕುಮಾರ್ ಅವರು ಕಳೆದ 2018ರಿಂದ ನಿರ್ವಹಣಾ ಶುಲ್ಕ ಪಾವತಿಸಿರಲಿಲ್ಲ. ಇದರಿಂದ ಕೈಲಾಶ್ ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ಧಿ ಸಂಘದಿಂದ ಶುಲ್ಕ ಪಾವತಿಸುವಂತೆ ಸೂಚನೆ ನೀಡಿತ್ತು. ಜೊತೆಗೆ, ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ರವಿಕುಮಾರ್ ನಿರ್ವಹಣಾ ಶುಲ್ಕ ಪಾವತಿಸಿರಲಿಲ್ಲ. ಆದ್ದರಿಂದ ಸಂಘದ ನಿಯಮಾವಳಿಗಳ ಪ್ರಕಾರ ರವಿಕುಮಾರ್ ಮನೆಗೆ ವಿದ್ಯುತ್ ಸೇರಿದಂತೆ ಇತರೆ ಸೌಲಭ್ಯಗನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರವಿಕುಮಾರ್, ಜಾತಿ ಕಾರಣದಿಂದ ನನಗೆ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಈ ಸಂಬಂಧ ಸಹಕಾರ ಸಂಘಗಳ ರಿಜಿಸ್ಟ್ರಾರ್, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಅಲ್ಲದೆ, ಖಾಸಗಿ ದೂರಿನ ಆಧಾರದಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ರದ್ದು ಕೋರಿ ಅರುಣ ಕಣ್ಣೂರು ಮತ್ತಿತರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
(ಓದಿ: ವಿನಾಕಾರಣ ಅರ್ಜಿ ಸಲ್ಲಿಸಿದವರಿಗೆ 5 ಲಕ್ಷ ರೂ ದಂಡ : ಹೈಕೋರ್ಟ್)