ಬೆಂಗಳೂರು : ಸಮುದ್ರ ತೀರದಲ್ಲಿ ಕೆಲ ಸಂಸ್ಥೆಗಳು ಸೀ ಫುಡ್ ಕೈಗಾರಿಕೆಗಳನ್ನು ನಡೆಸುವ ಮೂಲಕ ಕರಾವಳಿ ನಿಯಂತ್ರಣಾ ವಲಯದ ನಿಯಮಗಳನ್ನು ಉಲ್ಲಂಘಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಪಿ.ಆರ್ ಶೆಟ್ಟಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಿಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಅರ್ಜಿದಾರರು ಆರೋಪಿಸಿರುವ ಸಂಸ್ಥೆಗಳ ವಿರುದ್ಧ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಕೆಎಸ್‌ಪಿಸಿಬಿ ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮಾ.29ಕ್ಕೆ ಮುಂದೂಡಿತು.
ಅರ್ಜಿದಾರರ ಆರೋಪ : ದಕ್ಷಣ ಕನ್ನಡ ಜಿಲ್ಲೆಯ ಸುರತ್ಕಲ್ ಕರಾವಳಿ ನಿಯಂತ್ರಣ ವಲಯದ (ಸಿಆರ್ಜೆಡ್) ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಮುಕ್ಕಾ ಬೀಚ್ ರಸ್ತೆಯಲ್ಲಿ ಮುಕ್ಕಾ ಸೀ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಬಾವಾ ಫಿಷ್ ಮಿಲ್ ಅಂಡ್ ಕಂಪನಿ ಹಾಗೂ ಹೆಚ್‌ಕೆಎ ಬಾವಾ ಅಂಡ್ ಸನ್ಸ್ ಮೀನು ಸಂಸ್ಕರಣಾ ಘಟಕಗಳು ಮೀನಿನ ಎಣ್ಣೆ, ಮೀನಿನ ಆಹಾರ ಉತ್ಪಾದನೆಯಲ್ಲಿ ತೊಡಗಿವೆ.
ಈ ಮೂರು ಘಟಕಗಳು ಅರಬ್ಬಿ ಸಮುದ್ರದಿಂದ ಕೇವಲ 50 ಮೀಟರ್ ದೂರದಲ್ಲಿದ್ದು, 2011ರ ಸಿಆರ್ಜೆಡ್ ಅಧಿಸೂಚನೆ ಉಲ್ಲಂಘಿಸುತ್ತಿವೆ. ಸಂಸ್ಕರಣಾ ಘಟಕಗಳಿಂದ ಸೃಷ್ಟಿಯಾಗುತ್ತಿರುವ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಅಲ್ಲದೇ ಜಲ ಮಾಲಿನ್ಯಕ್ಕೂ ಕಾರಣವಾಗಿದೆ.
ಜನವಸತಿ ಪ್ರದೇಶದಲ್ಲಿರುವ ಘಟಕಗಳಿಂದ ಶಬ್ಧ ಮಾಲಿನ್ಯವೂ ಆಗುತ್ತಿದೆ. ಶುದ್ಧ ವಾತಾವರಣದ ಹಕ್ಕು ಉಲ್ಲಂಘಿಸುತ್ತಿರುವ ಘಟಕಗಳನ್ನು ತೆರವು ಮಾಡುವಂತೆ ಸರ್ಕಾರ ಹಾಗೂ ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.