ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ಇಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ರಸ್ತೆ, ಉದ್ಯಾನವನ ಮತ್ತಿತರ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ದೇವಾಲಯ, ಮಸೀದಿ, ಚರ್ಚ್ ಧಾರ್ಮಿಕ ಕಟ್ಟಡಗಳ ತೆರವಿಗೆ
ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತು. ದೇವರ ಹೆಸರಿನಲ್ಲಿ ಅಕ್ರಮ ಮುಂದುವರಿಸಲು ಅವಕಾಶ ನೀಡುವುದು ಎಷ್ಟರ ಮಟ್ಟಿಗೆ ಸರಿ ? ಸರ್ಕಾರಕ್ಕೆ ಅಕ್ರಮ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ನಿಜವಾಗಿಯೂ ಇಚ್ಚಾಶಕ್ತಿ ಇಲ್ಲವೇ ? ಎಂದು ಪ್ರಶ್ನೆ ಮಾಡಿತು.
ಅಕ್ರಮ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲು ಈಗಾಗಲೇ ಮಾರ್ಚ್ 31ರ ವರೆಗೆ ಕಾಲಾವಕಾಶ ಕೋರಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಪ್ರಮಾಣಪತ್ರ ತಿರಸ್ಕಾರ ಮಾಡಿ, ಹೊಸದಾಗಿ ನಿರ್ಣಹಿಸಿರುವ ಕ್ರಮದ ಪ್ರಮಾಣಪತ್ರ ಸಲ್ಲಿಸಲು ಫೆಬ್ರವರಿ ನಾಲ್ಕಕ್ಕೆ ಸೂಚಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.