ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಕಬಳಿಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವಿಶೇಷ ವರದಿಯನ್ನು, ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ವಕ್ಫ್ ವರದಿಯನ್ನು ಮಂಡಿಸದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಾಜಿ ಸಚಿವ ಎಸ್.ಕೆ. ಕಾಂತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೋರ್ಟ್ ನಡೆಸಿತು. ಮುಖ್ಯ ನ್ಯಾಯಮೂರ್ತಿ ಪಿ.ಬಿ. ವಾರಾಲೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಪರ ವಕೀಲರು, ರಾಜ್ಯ ಸಚಿವ ಸಂಪುಟ 2022ರ ಸೆ. 21ರಂದು ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿಸಿದರು.
ಕಾಲಾವಕಾಶಕ್ಕೆ ಮನವಿ: ಅಲ್ಲದೇ, ಉಭಯ ಸದನದಲ್ಲಿ ಮಂಡಿಸಿದ ನಂತರ ವಿಶೇಷ ವರದಿ ಮೇಲೆ ಮಂದಿನ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಅದರಂತೆ ಸರ್ಕಾರ ತೀರ್ಮಾನ ಕೈಗೊಂಡ ನಂತರ ಆ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ಅದಕ್ಕಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಿಚಾರಣೆ 4 ವಾರ ಮುಂದೂಡಿಕೆ: ಆ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು. ವಿಶೇಷ ವರದಿಯನ್ನು ಉಭಯ ಸದನಗಳಲ್ಲಿ ಮಂಡಿಸಿದ ಬಳಿಕ ಕೈಗೊಂಡ ಕ್ರಮಗಳೇನು ಹಾಗೂ ವರದಿಯನ್ನು ಯಾವಾಗ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೆ. 28ರಂದು ನಿರ್ದೇಶಿಸಿತ್ತು.
ಈ ಹಿಂದೆ ಸೂಚನೆ ನೀಡಿದ್ದ ಕೋರ್ಟ್: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ರ್ದುಬಳಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗ 2012ರಲ್ಲಿ ಸಲ್ಲಿಸಿರುವ ವಿಶೇಷ ವರದಿಯ ಶಿಫಾರಸುಗಳನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ&1994ರ ಸೆಕ್ಷನ್ 10 (2) ಪ್ರಕಾರ ವಿಧಾನಮಂಡಳದ ಉಭಯ ಸದನಗಳಲ್ಲಿ ಮಂಡಿಸಿರುವ ಬಗ್ಗೆ ವಿವರ ನೀಡಬೇಕು.
ಅದೇ ರೀತಿ ಅಯೋಗದ ವರದಿ ಆಧರಿಸಿ ಲೋಕಾಯುಕ್ತ ಸಂಸ್ಥೆಯು 2012ರಲ್ಲಿ ನೀಡಿದ ವರದಿ ಮೇಲೆ ಕರ್ನಾಟಕ ಲೋಕಾಯುಕ್ತ ಕಾಯ್ದೆ&1984ರ ಸೆಕ್ಷನ್ 12 (2) ಪ್ರಕಾರ ಕೈಗೊಂಡ ಕ್ರಮಗಳ ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಓಲಾ, ಉಬರ್ ಆಟೋ ರಿಕ್ಷಾ ಸೇವೆ: ಬಲವಂತದ ಕ್ರಮ ಬೇಡ, ಪ್ರಯಾಣ ಶುಲ್ಕ ನಿಗದಿಗೆ ಹೈಕೋರ್ಟ್ ಸೂಚನೆ
ಪ್ರಕರಣದ ಹಿನ್ನೆಲೆ ಏನು?: ಅಲ್ಪಸಂಖ್ಯಾತರ ಆಯೋಗದ ವಿಶೇಷ ವರದಿಯಲ್ಲಿ ಮಾಡಲಾದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗೆ ನಿರ್ದೇಶನ ನೀಡಬೇಕು. ವರದಿಯಲ್ಲಿನ ಅಂಶಗಳನ್ನು ಆಧರಿಸಿ ಅದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ಮಾಡಬೇಕು ಎಂದು ಅಜಿರ್ಯಲ್ಲಿ ಮನವಿ ಮಾಡಲಾಗಿದೆ.
ಅದೇ ರೀತಿ 2012ರಲ್ಲಿ ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಸೇರಿದಂತೆ ರಾಜ್ಯ ಸರ್ಕಾರ ಮತ್ತು ಲೋಕಾಯುಕ್ತ ಬಳಿ ಇರುವ ಎಲ್ಲ ದಾಖಲೆಗಳನ್ನು ನ್ಯಾಯಾಲಯ ತರಿಸಿಕೊಳ್ಳಬೇಕು ಎಂದು ಅಜಿರ್ದಾರರು ಮಧ್ಯಂತರ ಮನವಿ ಮಾಡಿದ್ದಾರೆ.