ETV Bharat / state

ನ್ಯಾಯಾಂಗ ನಿಂದನೆ ಆರೋಪ: ಅಧಿಕಾರಿಗೆ 5 ಸಾವಿರ ರೂ ದಂಡ ವಿಧಿಸಿದ ಹೈಕೋರ್ಟ್

author img

By ETV Bharat Karnataka Team

Published : Jan 14, 2024, 9:09 AM IST

Updated : Jan 14, 2024, 10:02 AM IST

ನ್ಯಾಯಾಂಗ ನಿಂದನೆ ಮಾಡಿದ ಭೂ ದಾಖಲೆ ಇಲಾಖೆಯ ಅಧಿಕಾರಿಗೆ 5 ಸಾವಿರ ರೂ. ದಂಡವನ್ನು ಹೈಕೋರ್ಟ್ ವಿಧಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾದ ಭೂ ದಾಖಲೆ ಇಲಾಖೆಯ ಅಧಿಕಾರಿಯೊಬ್ಬರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, 5 ಸಾವಿರ ರೂ. ದಂಡವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಲು ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾಯಾಲಯದ ಆದೇಶವಿದ್ದರೂ ಪೋಡಿ ಮಾಡಿಕೊಡದ ಭೂ ದಾಖಲೆಗಳ ಸಹಾಯಕ ನಿರ್ದೇಶಕ(ಎಡಿಎಲ್‌ಆರ್)ರ ಕ್ರಮ ಪ್ರಶ್ನಿಸಿ ಜಯಲಕ್ಷ್ಮಮ್ಮ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ತಪ್ಪಿತಸ್ಥ ಅಧಿಕಾರಿಯ ಸೇವಾ ದಾಖಲೆಗಳಲ್ಲಿ ಪ್ರತಿಕೂಲ ವಿಚಾರ(ನೆಗೆಟಿವ್) ದಾಖಲಿಸಲು ಮೇಲಾಧಿಕಾರಿಗಳಿಗೆ ತಿಳಿಸಿದೆ.

ಈ ಆದೇಶದ ಪ್ರತಿಯನ್ನು ರಿಜಿಸ್ಟ್ರಿಯು ಮುಖ್ಯ ಕಾರ್ಯದರ್ಶಿಗೆ ತುರ್ತಾಗಿ ಕಳುಹಿಸಬೇಕು. ಅವರು ಇದನ್ನು ಎಲ್ಲಾ ಇಲಾಖೆಗಳಿಗೂ ರವಾನಿಸಬೇಕು. ಆದೇಶದಲ್ಲಿ ಉಲ್ಲೇಖಿಸಿರುವ ವಿಚಾರಗಳನ್ನು ಅಧಿಕಾರಿಗಳು ಚಾಚೂ ತಪ್ಪದೇ ಪಾಲಿಸಬೇಕು. ಇದು ಸರ್ಕಾರಿ ದಾವೆ ನಡೆಸುವ ವಿಚಾರದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವಾಗಿ ಇರಲಿದೆ ಎಂದು ಆದೇಶಿಸಿದೆ.

ಜೊತೆಗೆ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆದೇಶ ಅನುಪಾಲನೆಯನ್ನು ನ್ಯಾಯಾಲಯ ಬಯಸುತ್ತದೆ. ಇದನ್ನು ನಿರೀಕ್ಷಿಸಿರಲಿಲ್ಲ ಮತ್ತು ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಕಾನೂನು ಹೋರಾಟದಲ್ಲಿ ಜಯ ಸಾಧಿಸಿದ ಪಕ್ಷಕಾರರಿಗೆ ಕಾಗದದ ಆದೇಶ/ಡಿಕ್ರಿ ಮಾತ್ರ ಇರುತ್ತದೆ. ಇದು ನ್ಯಾಯಾಂಗ ಪ್ರಕ್ರಿಯೆಯ ಉದ್ದೇಶವಲ್ಲ ಎಂದು ಆದೇಶದಲ್ಲಿ ದಾಖಲಿಸಿದೆ.

ದಿನನಿತ್ಯ ಇಂಥ ಪ್ರಕರಣಗಳು ನಮ್ಮ ಮುಂದೆ ಬರುತ್ತಿದ್ದು, ಸರ್ಕಾರಿ ಅಧಿಕಾರಿಗಳ ನೀರಸ ವರ್ತನೆಯಿಂದ ಸರ್ಕಾರ ಮತ್ತು ಸರ್ಕಾರದ ಸಂಸ್ಥೆಗಳನ್ನು ಪ್ರತಿನಿಧಿಸುವ ವಕೀಲರು ಮುಜುಗರದ ಸನ್ನಿವೇಶ ಎದುರಿಸುವಂತಾಗಿದೆ. ಪ್ರತಿವಾದಿಯಾದ ಸರ್ಕಾರ ಅಥವಾ ಯಾರೇ ಆದರೂ ನ್ಯಾಯಾಲಯದ ಆದೇಶ ಪಾಲಿಸಬೇಕು. ಅದನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಮಾಡಬೇಕು. ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನೊಟೀಸ್ ಪಡೆದ ತಕ್ಷಣವಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅದರ ಅನುಪಾಲನೆಗೆ ಎಲ್ಲಾ ಕ್ರಮವಹಿಸಬೇಕು. ಆದರೆ, ನ್ಯಾಯಾಲಯದಲ್ಲಿ ನಮ್ಮ ಅನುಭವ ಬೇರೆಯದ್ದೇ ಆಗಿದ್ದು, ಅದು ಹೇಳುವಂಥದ್ದಲ್ಲ ಎಂದು ಮೌಖಿಕವಾಗಿ ತಿಳಿಸಿತು.

ಸರ್ಕಾರಿ ಅಧಿಕಾರಿಗಳು ಮತ್ತು ಪ್ರಾಧಿಕಾರ ಪ್ರತಿನಿಧಿಸುವವರು ಅವರಿಗೆ ತಿಳಿದಿರುವ ಕಾರಣಗಳಿಗಾಗಿ ಮತ್ತು ಕೆಲವು ಸಂದರ್ಭದಲ್ಲಿ ಸ್ಪಷ್ಟ ಕಾರಣಗಳಿಗಾಗಿ ನೊಟೀಸ್ ಸ್ವೀಕರಿಸಿಯೂ ಆದೇಶ ಪಾಲಿಸುವುದಿಲ್ಲ. ಇದರ ಜೊತೆಗೆ ಗಾಯಕ್ಕೆ ಉಪ್ಪು ಸವರಿದಂತೆ ಸರ್ಕಾರದ ವಕೀಲರಿಗೆ ಸೂಚನೆಯನ್ನೂ ನೀಡುವುದಿಲ್ಲ. ಈ ಮೂಲಕ ಮುಕ್ತ ನ್ಯಾಯಾಲಯದಲ್ಲಿ ವಕೀಲರನ್ನು ಮುಜುಗರದ ಸನ್ನಿವೇಶಕ್ಕೆ ನೂಕುತ್ತಾರೆ. ವಕೀಲರು ಕಕ್ಷಿದಾರರ ಮುಖವಾಣಿಗಳಷ್ಟೇ ಅಲ್ಲ; ಅವರು ನ್ಯಾಯಾಲಯದ ಅಧಿಕಾರಿಗಳೂ ಹೌದು. ಸರ್ಕಾರ ಮತ್ತು ಅದರ ಅಧಿಕಾರಿ ವರ್ಗ ಅವರ ಕಕ್ಷಿದಾರರಾಗಿದ್ದು, ಸೂಚನೆ ನೀಡುವುದರ ಜೊತೆಗೆ ದಾಖಲೆಗಳನ್ನು ಹಂಚಿಕೊಳ್ಳುವುದು ಕರ್ತವ್ಯದ ಭಾಗ. ಇದರಿಂದ ನ್ಯಾಯಾಲಯದ ಅವಶ್ಯಕತೆಗೆ ಅನುಗುಣವಾಗಿ ದಾಖಲೆ ಸಲ್ಲಿಸಬಹುದಾಗಿರುತ್ತದೆ ಎಂದಿದೆ.

ಪ್ರಕರಣದ ಹಿನ್ನೆಲೆ ಏನು?: ತಂದೆ ಕಾಲವಾಗಿದ್ದು, ಅವರು ನೀಡಿರುವ ಜಮೀನಿನ ಪೋಡಿ ಮತ್ತು ದುರಸ್ತಿ ಮಾಡಿಕೊಡುವಂತೆ ಬೆಂಗಳೂರಿನ ಯಲಹಂಕ ತಾಲೂಕಿನ ರಾಜನಕುಂಟೆ ಗ್ರಾಮದ ಟಿ ವಿ ಜಯಲಕ್ಷ್ಮಮ್ಮ ಅವರು ತಹಶೀಲ್ದಾರ್​ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್​ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠವು ಮೂರು ತಿಂಗಳಲ್ಲಿ ಅರ್ಜಿದಾರೆಯ ಜಮೀನು ಪೋಡಿ ಮತ್ತು ದುರಸ್ತಿತಿಗೆ ಕ್ರಮ ವಹಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಮೋಹನ್ ಕುಮಾರ್ ಅವರಿಗೆ ನಿರ್ದೇಶಿಸಿತ್ತು.

ಇದರ ಹೊರತಾಗಿಯೂ ಜಯಲಕ್ಷ್ಮಮ್ಮ ಅವರು 2022ರ ಮೇ ತಿಂಗಳಲ್ಲಿ ಎಡಿಎಲ್‌ಆರ್​ಗೆ ಪ್ರತ್ಯೇಕ ಮನವಿಯನ್ನೂ ನೀಡಿದ್ದರು. ಆದಾಗ್ಯೂ, ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಮೋಹನ್ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಪೀಠ, ನೊಟೀಸ್ ಜಾರಿ ಮಾಡಿ, ಆದೇಶ ಅನುಪಾಲನೆಗೆ ಸೂಚಿಸಿತ್ತು. ಮೋಹನ್ ಕುಮಾರ್ ಅವರು ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪಾಲಿಸಲಾಗುವುದು ಅದಕ್ಕೆ ಒಂದಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರು. ಆದರೆ, ಆದೇಶ ಪಾಲಿಸಿರಲಿಲ್ಲ. ಇಷ್ಟಾದರೂ ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ.

ಇದನ್ನೂ ಓದಿ : ಸಾಲ ಮರುಪಾವತಿಸದೆ ವಂಚಿಸಿದ ಆರೋಪ: ಎಫ್‌ಐಆರ್ ರದ್ದುಕೋರಿ ಹೈಕೋರ್ಟ್​ಗೆ ರಮೇಶ್ ಜಾರಕಿಹೊಳಿ ಅರ್ಜಿ

Last Updated : Jan 14, 2024, 10:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.