ಬೆಂಗಳೂರು : ಡ್ರಗ್ ಇನ್ಸ್ಪೆಕ್ಟರ್ಗಳ ನೇಮಕಕ್ಕೆ ಮಾಡಿರುವ ಪಟ್ಟಿಯನ್ನು ರದ್ದುಗೊಳಿಸಿರುವ ಹೈಕೋರ್ಟ್, ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ನಿರ್ದೇಶನ ನೀಡಿದೆ. ಎನ್. ಹರೀಶ್ ಎಂಬುವರು ಸೇರಿದಂತೆ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ ಜಿ ನರೇಂದರ್ ಮತ್ತು ನ್ಯಾ ಶಿವಶಂಕರ್ ಅಮರಣ್ಣವರ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಜತೆಗೆ ಸರ್ಕಾರ ಡ್ರಗ್ ಇನ್ಸ್ಪೆಕ್ಟರ್ಗಳ ನೇಮಕಕ್ಕೆ ಹೆಚ್ಚುವರಿ ಅರ್ಹತೆ ನಿಗದಿಪಡಿಸಿ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಡ್ರಗ್ ಮತ್ತು ಕಾಸ್ಮೆಟಿಕ್ಸ್ (ಡಿ ಅಂಡ್ ಸಿ) ಕಾಯಿದೆ 1940 ಅಡಿ ಸರ್ಕಾರಕ್ಕೆ ಹೆಚ್ಚುವರಿ ಅರ್ಹತೆಗಳನ್ನು ನಿಗದಿಪಡಿಸುವ ಯಾವುದೇ ಅಧಿಕಾರವಿಲ್ಲ ಎಂದು ಆದೇಶ ನೀಡಿದೆ.
ಕಾಯಿದೆಯಲ್ಲಿ ಉಲ್ಲೇಖಿಸಿರುವ ವಿದ್ಯಾರ್ಹತೆ ಜತೆಗೆ ಹೆಚ್ಚುವರಿ ಅರ್ಹತೆಗಳನ್ನು ನಿಗದಿಪಡಿಸುವುದು ಅಸಂವಿಧಾನಿಕವಾಗುತ್ತದೆ ಮತ್ತು ಅದು ಡಿ ಮತ್ತು ಸಿ ಕಾಯಿದೆ ಸೆಕ್ಷನ್ 33 ಮತ್ತು ಡಿ ಮತ್ತು ಸಿ ನಿಯಮ 1945ರ ನಿಯಮ 49ಕ್ಕೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಡಿ ಮತ್ತು ಸಿ ಕಾಯಿದೆಯಡಿ ಶಾಸನಾತ್ಮಕ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯಕ್ಕೆ ಆ ಕಾಯಿದೆಗೆ ವ್ಯತಿರಿಕ್ತ ಆದೇಶಗಳನ್ನು ಮಾಡುವ ಅಧಿಕಾರವಿಲ್ಲ. ಜತೆಗೆ ಹೆಚ್ಚುವರಿ ಅರ್ಹತೆಗಳನ್ನು ನಿಗದಿಪಡಿಸಲಿ, ಮೂಲ ಕಾಯಿದೆಯಲ್ಲೇ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: 29 ಲಕ್ಷ ರೂ.ಗಳ ದುರುಪಯೋಗ, 28 ವರ್ಷ ಕಳೆದರೂ ಕ್ರಮಕ್ಕೆ ಮುಂದಾಗದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ
ಪ್ರಕರಣದ ಹಿನ್ನೆಲೆ : ಕರ್ನಾಟಕ ಲೋಕಸೇವಾ ಆಯೋಗ 2018ರಲ್ಲಿ 83 ಡ್ರಗ್ ಇನ್‌ಸ್ಪೆಕ್ಟರ್ (ಔಷಧ ನಿರೀಕ್ಷಕರು) ಹುದ್ದೆೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆಯೋಗ ಆಯ್ಕೆ ಪ್ರಕ್ರಿಯೆ ಆರಂಭಿಸಿದ ನಂತರ, ಅದೂ ಕೆಲವು ಅಭ್ಯರ್ಥಿಗಳ ಸಂದರ್ಶನ ಮುಗಿದ ಬಳಿಕ ಸರ್ಕಾರ ಅರ್ಹತಾ ಮಾನದಂಡವನ್ನು ಬದಲಾಯಿಸಿ, ಅಭ್ಯರ್ಥಿಯು ಶೆಡ್ಯೂಲ್ ಸಿ ಮತ್ತು ಸಿ 1 ಡ್ರಗ್ ತಯಾರಕ ಅಥವಾ ಪರೀಕ್ಷಾ ಸಂಸ್ಥೆಯಲ್ಲಿ ಕನಿಷ್ಟ 18 ತಿಂಗಳ ಅನುಭವ ಹೊಂದಿರಬೇಕು ಎಂದು ಆದೇಶಿಸಿತ್ತು.
ಇದನ್ನೂ ಓದಿ: ಮುಂದಿನ ಆರು ತಿಂಗಳಲ್ಲಿ ರಾಜ್ಯದ ಮೂರು ಕಂದಾಯ ವಿಭಾಗಗಳಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಸ್ಥಾಪಿಸಲು ಹೈಕೋರ್ಟ್ ಶಿಫಾರಸು
ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಆಯ್ಕೆ ಪಟ್ಟಿಯಲ್ಲಿದ್ದ 58 ಮಂದಿ ಅಭ್ಯರ್ಥಿಗಳ ಪೈಕಿ 25 ಮಂದಿ ಈಗಾಗಲೇ ಸೇವೆಯಲ್ಲಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲು ಅರ್ಹತಾ ಮಾನದಂಡ ಬದಲಾಯಿಸಲಾಗಿದೆ. ಆದರೆ ನಿಯಮದ ಪ್ರಕಾರ, ಸರ್ಕಾರಕ್ಕೆ ಹೆಚ್ಚುವರಿ ಮಾನದಂಡ ನಿಗದಿಪಡಿಸುವ ಅಧಿಕಾರವಿಲ್ಲ. ಹಾಗಾಗಿ ಹೆಚ್ಚುವರಿ ಅರ್ಹತೆ ನಿಗದಿಪಡಿಸಿ ಹೊರಡಿಸಿದ್ದ ಆದೇಶ ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: ಮಗುವನ್ನು ಪತಿಯ ಸುಪರ್ದಿಗೆ ನೀಡದ ಪತ್ನಿ : ಹೈಕೋರ್ಟ್ನಿಂದ ಜಾಮೀನು ರಹಿತ ವಾರಂಟ್