ಬೆಂಗಳೂರು : ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶರಣರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಆಲಿಸಿದ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಮುರುಘಾ ಶರಣರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ ಈ ಆದೇಶ ನೀಡಿದೆ. ವಿಸ್ತೃತವಾದ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಆದೇಶದಿಂದಾಗಿ ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ಶ್ರೀಗಳಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಅರ್ಜಿ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ದೂರು ಸಲ್ಲಿಸಲು ಸಂತ್ರಸ್ತರಿಗೆ ನೆರವಾಗಿದ್ದ ಒಡನಾಡಿ ಸೇವಾ ಸಂಸ್ಥೆಯ ಪರವಾಗಿ ವಕೀಲ ಡಿ.ಸಿ. ಶ್ರೀನಿವಾಸ್, ಆರೋಪಿ ಶ್ರೀಗಳು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರಿಗೆ ಜಾಮೀನು ನೀಡಿದರೆ ಪ್ರಕರಣದಲ್ಲಿನ ಸಂತ್ರಸ್ತರಾದ ಬಡ ಮಕ್ಕಳಿಗೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ. ಶರಣರು ತಮ್ಮನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂಬುದಾಗಿ ಸಂತ್ರಸ್ತರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸ್ವಯಂಕೃತ ಹೇಳಿಕೆ ದಾಖಲಿಸಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಶರಣರಿಗೆ ಜಾಮೀನು ನೀಡಬಾರದು ಎಂದು ನ್ಯಾಯಪೀಠವನ್ನು ಕೋರಿದ್ದರು.
ಇದನ್ನೂ ಓದಿ: ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಆಯ್ಕೆ
ಸರ್ಕಾರಿ ಅಭಿಯೋಜಕರು, ಶಿವಮೂರ್ತಿ ಶರಣರು ತಮ್ಮ ಮಠದಲ್ಲಿನ ಹಾಸ್ಟೆಲ್‌ನ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಶೋಷಿಸಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಹೈಕೋರ್ಟ್‌ಗೆ ಕೋರಿದ್ದರು. ಶರಣರ ಪರ ವಕೀಲರು, ಸಂತ್ರಸ್ತೆಯರ ಮೇಲೆ ಅರ್ಜಿದಾರರು ಲೈಂಗಿಕ ದೌರ್ಜನ್ಯ ನಡೆಸಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿರುವ ಕಾರಣ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಷರತ್ತು ವಿಧಿಸಿದ ಹೈಕೋರ್ಟ್: ಮುರುಘಾ ಶ್ರೀಗಳಿಗೆ ಹೈಕೋರ್ಟ್ ಕೆಲ ಷರತ್ತು ವಿಧಿಸಿದ್ದು, ಅವು ಇಂತಿವೆ.. 1. ಚಿತ್ರದುರ್ಗಕ್ಕೆ ಮುರುಘಾ ಶ್ರೀ ಪ್ರವೇಶಿಸುವಂತಿಲ್ಲ. 2. ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡತಕ್ಕದ್ದು. 3. ಜಾಮೀನು ಸಿಕ್ಕರೂ ಸದ್ಯಕ್ಕೆ ಮುರುಘಾಶ್ರೀ ಬಿಡುಗಡೆ ಇಲ್ಲ. 4. ಮತ್ತೊಂದು ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಬಾಕಿ. 5. ಇಬ್ಬರು ಶ್ಯೂರಿಟಿಗಳನ್ನು ಒದಗಿಸತಕ್ಕದ್ದು. 6. ಕೋರ್ಟ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು. 7. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ. 8. ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡುವಂತಿಲ್ಲ. 9. ಮುರುಘಾ ಶ್ರೀ ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ. 10. 2 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಒದಗಿಸಬೇಕು.
ಪ್ರಕರಣದ ಹಿನ್ನೆಲೆ: ಮುರಘಾಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ್ದರು. ನಂತರ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಇದನ್ನೂ ಓದಿ: ಮುರುಘಾ ಶರಣರ ಜಾಮೀನು ಅರ್ಜಿ ತೀರ್ಪು ಇಂದು