ಬೆಂಗಳೂರು: ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದಡಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ಅಲ್ - ಹಿಂದ್ ಸಂಘಟನೆಯ ಸದಸ್ಯ ಎನ್ನಲಾದ ಸಲೀಂ ಖಾನ್‌ಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಸಲೀಂ ಖಾನ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಅಲ್ - ಹಿಂದ್ ಸಂಘಟನೆಯನ್ನು ನಿಷೇಧ ಮಾಡಿಲ್ಲ. ಅರ್ಜಿದಾರ ಸಲೀಂ ಖಾನ್ ಆ ಸಂಘಟನೆ ಸದಸ್ಯ ಎನ್ನಲಾಗಿದ್ದು, ಜಿಹಾದಿ ಸಭೆಯಲ್ಲಿ ಭಾಗವಹಿಸಿದ್ದಾನೆ. ತರಬೇತಿ ಉಪಕರಣಗಳನ್ನು ಖರೀದಿಸಿದ್ದಾನೆ ಮತ್ತು ಸಹ ಸದಸ್ಯರಿಗೆ ಆಶ್ರಯ ಕಲ್ಪಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇವು ಯುಎಪಿಎ ಕಾಯ್ದೆಯ ಸೆಕ್ಷನ್ 2(ಕೆ) ಅಥವಾ 2(ಎಂ) ಅಡಿ ಅಪರಾಧ ಕೃತ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಆರೋಪಿಗೆ ಜಾಮೀನು ನೀಡಿ ಆದೇಶಿಸಿದೆ.
ಇದೇ ವೇಳೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮತ್ತೊಬ್ಬ ಆರೋಪಿ ಮೊಹಮ್ಮದ್ ಜೈದ್‌ಗೆ ಜಾಮೀನು ನಿರಾಕರಿಸಿರುವ ಹೈಕೋರ್ಟ್, ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಆತ ಉಗ್ರಗಾಮಿ ಸಂಘಟನೆಯಲ್ಲಿ ಸಕ್ರಿಯ ಸದಸ್ಯನಾಗಿದ್ದಾನೆ. ಇತರ ಆರೋಪಿಗಳ ಜೊತೆಗೂಡಿ ಅಪರಾಧಿಕ ಮತ್ತು ಹಿಂತಾಸತ್ಮಕ ಚುಟುವಟಿಕೆಗಳಿಗೆ ಒಳಸಂಚು ನಡೆಸಿದ್ದಾನೆ. ಪ್ರಕರಣದ ಮೊದಲನೇ ಆರೋಪಿ ಮೆಹಬೂಬ್ ಪಾಷಾಯೊಂದಿಗೆ ಡಾರ್ಕ್ ವೆಬ್‌ಸೈಟ್ ಮೂಲಕ ಅಪರಿಚಿತ ಐಸಿಸ್ ಸಂಘಟನೆಯ ನಿರ್ವಾಹಕನ ಸಂಪರ್ಕ ಸಾಧಿಸಲು ಪ್ರಯತ್ನಿದ್ದಾನೆ ಎಂಬುದು ದೋಷಾರೋಪ ಪಟ್ಟಿಯಿಂದ ಸ್ಪಷ್ಟವಾಗಿದೆ. ಆದ್ದರಿಂದ ಜೈದ್ ಜಾಮೀನು ಪಡೆಯಲು ಅರ್ಹನಾಗಿಲ್ಲ ಎಂದು ಆದೇಶಿಸಿದೆ.
ಪ್ರಕರಣವೇನು?: ಸಿಸಿಬಿ ಪೊಲೀಸರು 2020ರ ಜ.10ರಂದು ನೀಡಿದ ಮಾಹಿತಿ ಮೇರೆಗೆ ಸಲೀಂ ಖಾನ್ ಮತ್ತು ಮೊಹಮ್ಮದ್ ಜೈದ್ ಸೇರಿದಂತೆ 17 ಆರೋಪಿಗಳ ಮೇಲೆ ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಯುಎಪಿಎ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಿದ್ದರು. ಜ.20ರಂದು ಸಲೀಂ ಖಾನ್ನನ್ನು ಬಂಧಿಸಲಾಗಿತ್ತು.
ಮಾ.9ರಂದು ಬಾಡಿವಾರೆಂಟ್ ಮೂಲಕ ಜೈದ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಜ. 23ರಂದು ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ಎನ್‌ಐಎ ಪೊಲೀಸರು ಸಲೀಂ ಖಾನ್ ಮತ್ತು ಜೈದ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ ಜಾಮೀನು ನಿರಾಕರಿಸಿ 2020ರ ಡಿ.29ರಂದು ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಯಾವುದೇ ವ್ಯಕ್ತಿಯನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್