ಬೆಂಗಳೂರು : ನಗರದ ಜಕ್ಕೂರು ಏರೋಡ್ರಮ್ ಪಕ್ಕದಲ್ಲೇ ಹಾದು ಹೋಗಲಿರುವ ಎಲಿವೇಟೆಡ್ ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭಿಸದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಜಕ್ಕೂರು ವಾಯುನೆಲೆಗೆ ಸಮೀಪದಲ್ಲಿ ಮೆಟ್ರೋ ರೈಲು ಮಾರ್ಗ ಕಾಮಗಾರಿ ಕೈಗೊಳ್ಳದಂತೆ ನಿರ್ದೇಶಿಸಲು ಕೋರಿ ವಕೀಲ ಅಜಯ್ ಕುಮಾರ್ ಪಾಟೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರ ವಾದ ಆಲಿಸಿದ ಪೀಠ, ಕಾಮಗಾರಿ ಆರಂಭಿಸುವಂತೆ ಅಕ್ಟೋಬರ್ 21ರವರೆಗೆ ಮಧ್ಯಂತರ ಆದೇಶ ನೀಡಿತು.
ಅಲ್ಲದೇ, ರಾಜ್ಯ ಸರ್ಕಾರ, ಸರ್ಕಾರಿ ವೈಮಾನಿಕ ಶಾಲೆ, ಬಿಎಂಆರ್‌ಸಿಎಲ್, ಭಾರತೀಯ ವಾಯುಪಡೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಫಣೀಂದ್ರ ವಾದಿಸಿ, ಜಕ್ಕೂರಿನಲ್ಲಿರುವ ಸರ್ಕಾರಿ ವಿಮಾನ ಹಾರಾಟ ತರಬೇತಿ ಶಾಲೆ ಮತ್ತು ರಾಷ್ಟ್ರೀಯ ಹೆದ್ದಾರಿ ಮಧ್ಯದ ಜಾಗದಲ್ಲಿ ಮೆಟ್ರೋ ಎಲಿವೇಟೆಡ್ ಟ್ರ್ಯಾಕ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.
ಆದರೆ, ಜಕ್ಕೂರು ವಾಯುನೆಲೆಯ ರನ್ ವೇ ಇಂದ 60 ಮೀಟರ್ ದೂರದವರೆಗೆ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂಬ ನಿಯಮವಿದೆ. ವಿಮಾನಗಳ ಹಾರಾಟಕ್ಕೆ ತೊಂದರೆಯಾಗದಂತೆ ಈ ನಿಯಮ ರೂಪಿಸಲಾಗಿದೆ. ಆದರೆ, ಈಗ ಡಿಜಿಸಿಎ ನಿಯಮಗಳಿಗೆ ವಿರುದ್ಧವಾಗಿ ವಾಯುನೆಲೆಗೆ ಹೊಂದಿಕೊಂಡಂತೆ ಮೆಟ್ರೋ ರೈಲು ಮಾರ್ಗ ನಿರ್ಮಿಸಲು ಮುಂದಾಗಿದೆ ಎಂದು ವಿವರಿಸಿದರು.