ಬೆಂಗಳೂರು: ಕೆಲ ದಿನಗಳಿಂದ ವೇತನ ಪರಿಷ್ಕರಣೆಗಾಗಿ ಹೆಚ್ಎಎಲ್ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಹೆಚ್ಎಎಲ್ ನೌಕರರ ಹೋರಾಟವನ್ನು ಪ್ರಶ್ನಿಸಿ ಹೆಚ್ಎಎಲ್ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಕೋರ್ಟ್ ಹೇಳಿದ್ದು:
'ಪ್ರತಿಭಟನೆಯಿಂದ ಹೆಚ್‌ಎಎಲ್‌ನ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಾರದು. ನಿಮ್ಮ ನಡೆಯಿಂದಾಗಿ ಸಂಸ್ಥೆಯ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಮುಷ್ಕರ ನಿಲ್ಲಿಸಿ'.
ನೌಕರರ ಮುಷ್ಕರದಿಂದ ಸಂಸ್ಥೆಗೆ ದಿನವೊಂದಕ್ಕೆ ಸರಾಸರಿ 17 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ದೂರಿ ಹೆಚ್‌ಎಎಲ್‌ನ ಆಡಳಿತ ಮಂಡಳಿ ಕೋರ್ಟ್‌ಗೆ ತಿಳಿಸಿತ್ತು. ಮುಷ್ಕರವನ್ನು ಕಾನೂನುಬಾಹಿರವೆಂದು ಹೇಳುತ್ತಾ, ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ವಾದಿಸಿತ್ತು.
ಪ್ರತಿಭಟನಾಕಾರರ ಸಮಸ್ಯೆ ಪರಿಹಾರಕ್ಕೆ ರಾಜಿ ಸಂಧಾನ ಕ್ರಮ ಮುಂದುವರಿಸುವಂತೆ ಮತ್ತು ವಿವಾದದ ಇತ್ಯರ್ಥಕ್ಕೆ ಸಹಕರಿಸುವಂತೆ ಹೆಚ್‌ಎಎಲ್‌ನ ಆಡಳಿತ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ.
ಮುಷ್ಕರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ, ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗಲಿದೆ. ಹಾಗಾಗಿ ಮುಷ್ಕರ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಹಿಂದೂಸ್ತಾನ್ ಏರೋನಾಟಿಕಲ್ಸ್ ನೌಕರರ ಸಂಘ (ಹೆಚ್‌ಎಇಎ) ಪ್ರತಿಕ್ರಿಯೆ ನೀಡಿದೆ.