ಕಲಬುರಗಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್ ಡಿ ಪಾಟೀಲ್ ಹಾಗೂ ಮಹಾಂತೇಶ ಪಾಟೀಲ್ ಸಹೋದರರಿಗೆ 8 ತಿಂಗಳ ನಂತರ ಹೈಕೋರ್ಟ್ ಜಾಮೀನು ನೀಡಿದೆ. ಕಲಬುರಗಿಯ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 48ಕ್ಕೆ ಸಂಬಂಧಿಸಿದಂತೆ 'ಆರ್‌ಡಿಪಿ ಬ್ರದರ್ಸ್'ಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಪರೀಕ್ಷೆ ಅಕ್ರಮ ಬಯಲಾದ ದಿನದಿಂದ ಜೈಲಿನಲ್ಲಿದ್ದ ಮಹಾಂತೇಶ ಪಾಟೀಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಆರ್ ಡಿ ಪಾಟೀಲ್ ವಿರುದ್ಧ ಬೇರೆ ಠಾಣೆಗಳಲ್ಲಿಯೂ ಪ್ರಕರಣಗಳಿದ್ದು ಬಿಡುಗಡೆಯಾಗಿಲ್ಲ.
ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಕಳೆದ ಏಪ್ರಿಲ್ 22 ರಂದು ಅಫಜಲಪುರನಲ್ಲಿ ಮಹಾಂತೇಶ ಪಾಟೀಲ್ನನ್ನು ಬಂಧಿಸಿದ್ದರು. ಏಪ್ರಿಲ್ 23 ರಂದು ಮಹಾರಾಷ್ಟ್ರದ ಸೋಲಾಪುರ ಹತ್ತಿರ ಇರುವುದನ್ನು ಪತ್ತೆ ಮಾಡಿ ಅಲ್ಲಿಂದಲೇ ಆರ್ ಡಿ ಪಾಟೀಲ್ನನ್ನೂ ಬಂಧಿಸಿದ್ದು, ಕಲಬುರಗಿಗೆ ಕರೆತರಲಾಗಿತ್ತು. ಆಗಿನಿಂದಲೂ ಜಾಮೀನಿಗಾಗಿ ಸಹೋದರರು ಪ್ರಯತ್ನಿಸುತ್ತಲೇ ಇದ್ದರೂ ತಕರಾರು ಅರ್ಜಿ ಸಲ್ಲಿಸುವ ಮೂಲಕ ಜಾಮೀನು ಸಿಗದಂತೆ ಸಿಐಡಿ ಅಧಿಕಾರಿಗಳು ನೋಡಿಕೊಂಡಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ ಆರ್ ಡಿ ಬ್ರದರ್ಸ್ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಸಿಐಡಿ ಬಲೆಗೆ ಆರ್‌ಡಿಪಿ ಅಳಿಯ