ಬೆಂಗಳೂರು : ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದ ಉಡುಪಿ ಜಿಲ್ಲೆಯ ಜಿತೇಂದ್ರ ಕುಮಾರ್ ರಾಜನ್ ಎಂಬುವರಿಗೆ ಹೈಕೋರ್ಟ್ 11 ಲಕ್ಷ ರೂ. ದಂಡ ವಿಧಿಸಿದೆ.
ಜಿತೇಂದ್ರ ಕುಮಾರ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ಎಂ.ಜಿ ಉಮಾ ಅವರಿದ್ದ ವಿಭಾಗೀಯ ಪೀಠ ದಂಡ ವಿಧಿಸಿ ಆದೇಶಿಸಿದೆ.
ಜಿತೇಂದ್ರ ಕುಮಾರ್ ರಾಜನ್ ಸಲ್ಲಿಸಿದ್ದ 11 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನೂ ವಜಾಗೊಳಿಸಿರುವ ಪೀಠ, ತಲಾ 1 ಲಕ್ಷ ರೂ.ನಂತೆ ಒಟ್ಟು 11 ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು 8 ವಾರಗಳಲ್ಲಿ ರಾಜ್ಯ ವಕೀಲರ ಪರಿಷತ್ತಿಗೆ ಪಾವತಿಸಬೇಕು.
ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಜಿಲ್ಲಾಧಿಕಾರಿ ದಂಡ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ದಂಡದ ಮೊತ್ತ ಪಾವತಿಯಾಗದಿದ್ದರೆ ವಕೀಲರ ಪರಿಷತ್ತು ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಅರ್ಜಿದಾರ ಅನಗತ್ಯ ಪ್ರಕರಣ ದಾಖಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿರುವುದಲ್ಲದೆ ರಿಜಿಸ್ಟ್ರಾರ್ ಜನರಲ್ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ನ್ಯಾಯಾಂಗದ ಅಧಿಕಾರಿಗಳನ್ನು ಬೆದರಿಸುವ ಕ್ರಮ ಅಕ್ಷಮ್ಯ. ಇಂತಹ ನಡೆ ನ್ಯಾಯಾಂಗನ್ನೇ ಅಣಕಿಸಿದಂತೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಅರ್ಜಿದಾರನ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿದೆ.
ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲ, ಗ್ರಾಮಗಳಲ್ಲಿ ಗೋಶಾಲೆ ಆರಂಭಿಸಿ : ಹೈಕೋರ್ಟ್
ಇದೇ ವೇಳೆ ಹೈಕೋರ್ಟ್ ಸಾಮಾನ್ಯವಾಗಿ ‘ಪಾರ್ಟಿ ಇನ್ ಪರ್ಸನ್’ (ಖುದ್ದಾಗಿ ವಾದ ಮಂಡಿಸುವ ಅರ್ಜಿದಾರ) ಬಗ್ಗೆ ದಯೆ, ತಾಳ್ಮೆ ತೋರಿಸುತ್ತದೆ. ಆದರೆ ನ್ಯಾಯಾಲಯದ ಒಳ್ಳೆಯತನವನ್ನು ದೌರ್ಬಲ್ಯವೆಂದು ತಿಳಿದರೆ ಸುಮ್ಮನಿರಲಾಗದು. ಕಠಿಣವಾಗಿ ಹತ್ತಿಕ್ಕಬೇಕಾಗುತ್ತದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ:
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿತೇಂದ್ರ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ 2021ರ ಮೇ 19ರಂದು ವಜಾಗೊಳಿಸಿ 1 ಲಕ್ಷ ರೂ. ದಂಡ ವಿಧಿಸಿತ್ತು. ದಂಡದ ಮೊತ್ತ ವಸೂಲಿಗೆ ರಿಜಿಸ್ಟಾರ್ ಜನರಲ್ ಅವರಿಗೆ ನಿರ್ದೇಶಿಸಿತ್ತು. ಈ ವೇಳೆ ದಂಡದ ಮೊತ್ತ ಪಾವತಿಸದ ಜಿತೇಂದ್ರ ರಿಜಿಸ್ಟ್ರಾರ್ ಜನರಲ್ ವಿರುದ್ಧವೇ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ. ಇದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ