ಬೆಂಗಳೂರು: ರಾಜ್ಯದ ಎಲ್ಲಾ ನ್ಯಾಯಾಲಯಗಳು ಹಾಗೂ ನ್ಯಾಯಾಧಿಕರಣಗಳು ಹೊರಡಿಸಿರುವ ಮಧ್ಯಂತರ ಆದೇಶಗಳ ಕಾರ್ಯಾಚರಣೆಗಳನ್ನು ಹೈಕೋರ್ಟ್, 2021ರ ಜನವರಿ 7ರವರೆಗೆ ವಿಸ್ತರಿಸಿ ಆದೇಶಿಸಿದೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್, ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ. ಅದರಂತೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ, ಧಾರವಾಡ ಪೀಠಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ವಿಚಾರಣಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಾಧಿಕರಣಗಳು, ಕಾರ್ಮಿಕ ನ್ಯಾಯಾಲಯಗಳು ಹೊರಡಿಸಿರುವ ಮಧ್ಯಂತರ ಆದೇಶಗಳು ಹಾಗೂ ಅವುಗಳ ಪರಿಣಾಮವಾಗಿ ನಡೆಸುವ ಕಾರ್ಯಾಚರಣೆಗಳು ಜನವರಿ 7ರವರೆಗೆ ವಿಸ್ತರಣೆಯಾಗಿವೆ.
ಇದೇ ವೇಳೆ ಪ್ರಕರಣಗಳನ್ನು ದಾಖಲಿಸುವುದಕ್ಕೆ ಸಂಬಂಧಿಸಿದ ಕಾಲಮಿತಿಯನ್ನೂ ವಿಸ್ತರಿಸಲಾಗಿದೆ. ಕಾಲಮಿತಿ ಅಧಿನಿಯಮ 1963ರ ಸೆಕ್ಷನ್ 4ರ ಪ್ರಕಾರ ಎಲ್ಲಾ ನ್ಯಾಯಾಲಯಗಳಿಗೆ ರಜೆ ಅನ್ವಯಿಸಲಾಗಿದೆ. ಕೊರೊನಾ ಪರಿಣಾಮವಾಗಿ ನ್ಯಾಯಾಲಯಗಳು ಎಸ್ಒಪಿ ಮಾರ್ಗಸೂಚಿಗಳ ಅನ್ವಯ ಸೀಮಿತವಾಗಿ ನಡೆಯುತ್ತಿರುವ ಹಿನ್ನೆಲೆ ಈ ಆದೇಶಗಳನ್ನು ಮಾಡಿರುವುದಾಗಿ ಹೈಕೋರ್ಟ್ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ಮೂವರು ಎಂಎಲ್ಸಿಗಳಿಗೆ ಸಚಿವ ಸ್ಥಾನ ವಿಚಾರ: ನ. 30ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್