ಬೆಂಗಳೂರು : ಕನಕಪುರ-ಬೆಂಗಳೂರು ರಸ್ತೆಯಲ್ಲಿ ವಾಹನ ಸವಾರರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಈ ಸಂಬಂಧ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಮುಂದಿನ ಎರಡು ವಾರದಲ್ಲಿ ವಿವರಣೆ ನೀಡುವಂತೆ ಸೂಚನೆ ನೀಡಿದೆ.
ಬೆಂಗಳೂರು-ಕನಕಪುರ ರಸ್ತೆ ವಿಸ್ತರಣೆ ಕುರಿತಂತೆ ಎಸ್ಪಿ ಸಂದೀಪ್ ರಾಜು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್ ಕಮಲ್ ಅವರಿದ್ದ ಪೀಠದಲ್ಲಿ ವಿಚಾರಣೆಗೆ ಬಂದಿತ್ತು.
ಈ ವೇಳೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಕ ಮಾಡಿದ್ದ ಕೋರ್ಟ್ ಕಮಿಷನರ್ ಸಲ್ಲಿಸಿದ ವರದಿಯನ್ನು ಪರಿಗಣಿಸಿದ ನ್ಯಾಯಪೀಠ, ದೇಶದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎ) ಪರಿಣಿತಿಯನ್ನು ಹೊಂದಿದೆ. ಆದರೂ ಸುರಕ್ಷತೆಯನ್ನು ಕಡೆಗಣಿಸಿದೆ ಎಂದು ನ್ಯಾಯಪೀಠ ತಿಳಿಸಿತು. ಅಲ್ಲದೆ, ರಸ್ತೆಯಲ್ಲಿ ಸಂಚರಿಸುವವರಿಗೆ ಸುರಕ್ಷತೆ ಬೇಕಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿತು.
ಇದಕ್ಕೂ ಮುನ್ನ ಎನ್ಎಚ್ಎ ಪರ ವಕೀಲರು, ಬೆಂಗಳೂರು- ಕನಕಪುರ ರಸ್ತೆಯನ್ನು ಎರಡು ಪಥಗಳಿಂದ ನಾಲ್ಕು ಪಥಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಸಂಬಂಧ ಗುತ್ತಿಗೆ ಪಡೆದಿದ್ದ ಕಂಪೆನಿ ಮಧ್ಯದಲ್ಲಿ ಕಾಮಗಾರಿ ಸ್ಥಗಿತಗೊಳಿಸಿತ್ತು. ಇದೀಗ ಮತ್ತೊಂದು ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ನಡೆಯುತ್ತಿದೆ.
ಈ ನಡುವೆ ಮೊದಲು ಗುತ್ತಿಗೆ ಪಡೆದ ಕಂಪನಿ ಮಳವಳ್ಳಿ ನ್ಯಾಯಾಲಯ ಮೆಟ್ಟಿಲೇರಿದ್ದು, ಪ್ರಸ್ತುತ ತಡೆಯಾಜ್ಞೆ ಇದೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು. ಅಲ್ಲದೆ, ಕೆಲ ಭಾಗಗಳಲ್ಲಿ ರಸ್ತೆ ನಾಲ್ಕು ಪಥಗಳಾಗಿದ್ದು, ಕೆಲ ಭಾಗಗಳಲ್ಲಿ ಎರಡು ಪಥಗಳಿವೆ. ಈ ಭಾಗಗಳಲ್ಲಿ ವಾಹನ ಸವಾರರಿಗೆ ಸುರಕ್ಷತೆಗೆ ಕ್ರಮ ಕೈಗೊಂಡಿದ್ದು, ಸಿಮೆಂಟ್ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಬಣ್ಣ ಬಳಿಯಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಸಿಮೆಂಟ್ ಬ್ಲಾಕ್ಗಳನ್ನು ಅಳವಡಿಸುವುದರಿಂದ ಸುರಕ್ಷತೆ ಇರಲಿದೆ ಎಂಬುದಾಗಿ ಹೇಳಲಾಗುವುದಿಲ್ಲ. ಎನ್ಎಚ್ಐಎ ಕ್ರಮ ತೃಪ್ತಕರವಾಗಿಲ್ಲ. ಇದರಿಂದ ರಾತ್ರಿ ವೇಳೆ ಸಂಚಾರ ಮಾಡುವವರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಬೆಂಗಳೂರು- ಮೈಸೂರು ರಸ್ತೆ ಟೋಲ್ ವಿವರ ಸಲ್ಲಿಸಿ : ಈ ವೇಳೆ ಮಧ್ಯ ಪ್ರವೇಶಿಸಿದ ವಕೀಲ ಜಿ. ಆರ್ ಮೋಹನ್, ಮೈಸೂರು- ಬೆಂಗಳೂರು ದಶಪಥ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಎಷ್ಟು ಕಿಲೋಮೀಟರ್ಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಎಷ್ಟು ಸಂಗ್ರಹ ಮಾಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: 1ನೇ ತರಗತಿಗೆ 6 ವರ್ಷ: ಸರ್ಕಾರದ ಅಧಿಸೂಚನೆ ಎತ್ತಿ ಹಿಡಿದ ಹೈಕೋರ್ಟ್