ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಮೋಹನ್ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಹರೀಶ್ ಶ್ರೀನಿವಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
ಚಾರ್ಚ್‌ಶೀಟ್ ವಿಳಂಬವಾಗಿದೆ ಅಥವಾ ಮ್ಯಾಜಿಸ್ಟ್ರೇಟ್ ಕಾಗ್ನಿಸೆನ್ಸ್ ತೆಗೆದುಕೊಳ್ಳುವಲ್ಲಿ ತಡವಾಗಿದೆ ಎಂಬ ಕಾರಣಕ್ಕೆ ಆರೋಪಿಯ ಬಂಧನವು ನಿಯಮ ಬಾಹಿರವಾಗುವುದಿಲ್ಲ. ಹೀಗಾಗಿ, ಜಾಮೀನು ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು, ಆರೋಪಿಯ ಜಾಮೀನು ಮನವಿ ತಿರಸ್ಕರಿಸಿದೆ.
ಆರೋಪಿ ಪರ ವಕೀಲರ ವಾದ : ಪ್ರಕರಣದಲ್ಲಿ ಮೋಹನ್ನನ್ನು 11ನೇ ಆರೋಪಿಯಾಗಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ 90 ದಿನಗಳ ನಂತರವೂ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿಲ್ಲ. 90 ದಿನಗಳ ನಂತರ ಕೋಕಾ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಚಾರ್ಜ್‌ಶೀಟ್ ಸಲ್ಲಿಸಲು ಮತ್ತೆ 90 ದಿನಗಳ ಕಾಲಾವಕಾಶವನ್ನು ಆರೋಪಿಯ ಒಪ್ಪಿಗೆ ಇಲ್ಲದೆ ನೀಡಲಾಗಿದೆ. ಇದು ಕಾನೂನು ಬಾಹಿರ.
ಅಲ್ಲದೇ, 2021ರ ಮೇ 22ರಂದು ಹೈಕೋರ್ಟ್‌ನ ಪೀಠ ಆರೋಪಿಯ ವಿರುದ್ಧ ಕೋಕಾ ಕಾಯ್ಗೆಯಡಿ ದಾಖಲಿಸಿದ್ದ ಆರೋಪಗಳನ್ನು ಕೈಬಿಟ್ಟಿದೆ. ಅದೇ ರೀತಿ 90 ದಿನಗಳಲ್ಲಿ ಆರೋಪಿತ ವ್ಯಕ್ತಿಯ ವಿರುದ್ಧ ದೋಷಾರೋಪಣೆ ಸಲ್ಲಿಸದೇ ಇರುವುದರಿಂದ ಸಿಆರ್‌ಪಿಸಿ ಸೆಕ್ಷನ್ 167(2)ರ ಅಡಿ ಜಾಮೀನು ನೀಡಬಹುದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ : ಹಿಂದುತ್ವದ ಕುರಿತ ಬಹಿರಂಗವಾಗಿ ಟೀಕಿಸಿದರೆಂಬ ಹಿನ್ನೆಲೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಆರೋಪಿತರು 2017ರ ಸೆಪ್ಟೆಂಬರ್ 5ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ.
ಈ ಸಂಬಂಧ 17 ಮಂದಿಯನ್ನು ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದು, ಆರೋಪಿತರು ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆಂದು ದೋಷಾರೋಪಣೆ ಸಲ್ಲಿಸಿದ್ದಾರೆ. ಹೀಗಾಗಿಯೇ, ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಪ್ರಲ್ಹಾದ್ ಜೋಶಿ, ಬಿ ಎಲ್ ಸಂತೋಷ ಫಸ್ಟ್.. ಉಳಿದವರು ಸಿಎಂ ರೇಸ್‌ನಲ್ಲಿ ಲಾಸ್ಟ್..
ಇತ್ತೀಚೆಗೆ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿಯ ವಿರುದ್ಧ ಕೋಕಾ ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಮೃತ ಗೌರಿ ಲಂಕೇಶ್ ಸೋದರಿ ಕವಿತಾ ಲಂಕೇಶ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೋಕಾ ಕಾಯ್ದೆ ಕೈಬಿಟ್ಟ ಆದೇಶದ ಪ್ರಭಾವಕ್ಕೆ ಒಳಗಾಗದೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು.