ಬೆಂಗಳೂರು : ಸ್ಯಾಮ್ಸ್‌ಸಂಗ್ ಇಂಡಿಯಾ ವಿರುದ್ಧ ಕಾನೂನು ಮಾಪನ ಕಾಯಿದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದು ಪಡಿಸಿರುವ ಹೈಕೋರ್ಟ್, ಕಾನೂನು ಮಾಪನ ಇಲಾಖೆ ಸಲ್ಲಿಸಿರುವ ದೂರು ಕ್ಷುಲ್ಲಕ ಕಾರಣದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಕೋರಿ ಮೆಸ್ ಸ್ಯಾಮ್ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಪ್ರಕರಣ ರದ್ದುಗೊಳಿಸಿದೆ.
ಅಲ್ಲದೆ, ದೂರಿನಲ್ಲಿರುವ ಅಂಶಗಳು ಸಂಪೂರ್ಣ ಕ್ಷುಲ್ಲಕ ಮತ್ತು ವಿಷಾದಕರವಾಗಿದೆ. ಎಲ್ಲ ಆರೋಪಗಳನ್ನು ಅಂಗೀಕರಿಸಿದರೂ, ಅದು ಅಪರಾಧದಿಂದ ಕೂಡಿಲ್ಲ. ಜತೆಗೆ, ಅಧಿಕಾರಿಗಳ ಈ ದೂರು ಪ್ಯಾಕೇಜಿಂಗ್ ನಿಯಮಗಳಿಗೆ ಸಂಪೂರ್ಣ ವಿರೋಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಮಾಪನ ಶಾಸ್ತ್ರ ಕಾಯಿದೆಯ ಸೆಕ್ಷನ್ 52 ಮತ್ತು 10ರಲ್ಲಿ ತಿಳಿಸಿರುವಂತೆ ತೂಕ ಅಳತೆ ಮತ್ತು ಸಂಖ್ಯೆಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ. ಆದರೆ, ಸರಕುಗಳ ಬೆಲೆ ಮತ್ತು ಗರಿಷ್ಟ ಚಿಲ್ಲರೆ ವ್ಯಾಪಾರ (ಎಂಆರ್ಪಿ)ಗೆ ಅನ್ವಯಿಸುವುದಿಲ್ಲ. ಹೀಗಾಗಿ ಸೆಕ್ಷನ್ 11ರ ಉಲ್ಲಂಘನೆಗೆ ಆರೋಪವನ್ನು ತಳ್ಳಿಹಾಕಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ದೂರಿನಲ್ಲಿ ವಿವರಿಸಿರುವ ಅಂಶಗಳು ಚಿಲ್ಲರೆ ಪ್ಯಾಕೇಜಿಂಗ್‌ಗೆ ಅನ್ವಯಿಸುತ್ತದೆ. ಅದಕ್ಕೆ ಬದಲಾಗಿ ಸಗಟು ಪ್ಯಾಕೇಜಿಂಗ್‌ಗೆ ಅನ್ವಯಿಸುವುದಿಲ್ಲ. ದೂರನ್ನು ಪರಿಶೀಲಿಸಿದಾಗ ದೂರು ಸಲ್ಲಿಸಿರುವುದೇ ದೋಷಪೂರಿತವಾಗಿದೆ ಎಂದು ಸ್ಪಷ್ಟವಾಗಿ ತಿಳಿಯಲಿದೆ ಎಂದು ಪೀಠ ಹೇಳಿದೆ.
ಜತೆಗೆ, ದೂರುದಾರರು ಅರ್ಜಿದಾರ ಕಂಪನಿಯ ವಿರುದ್ಧ ಯಾವುದೇ ಸೂಕ್ತ ಆರೋಪವನ್ನು ತಿಳಿಸಿಲ್ಲ. ಮತ್ತು ಕಾನೂನು ಮಾಪನ ಕಾಯಿದೆಯ ಸೆಕ್ಷನ್‌ಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದು, ದೂರು ದಾಖಲಾಗಿದೆ. ಈ ನಿಟ್ಟಿನಲ್ಲಿ ಪ್ರಕರಣ ರದ್ದು ಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ಅರ್ಜಿದಾರ ಕಂಪನಿಯ ವಿತರಕ ಸಂಸ್ಥೆಯಾಗಿರುವ ಮೆಸ್ ಎಬಿಎಂ ಟೆಲಿ ಮೊಬೈಲ್ಸ್ ಇಂಡಿಯಾ ಲಿಮಿಟೆಡ್‌ನ್ನು ಕಾನೂನು ಮಾಪನ ಇಲಾಖೆ ನಿರೀಕ್ಷಕರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸ್ಯಾಮ್ಸಂಗ್ ಗ್ಯಾಲೆಕ್ಸಿ ಟ್ಯಾಬ್-4ನ ಪ್ಯಾಕ್‌ನ ಗರಿಷ್ಟ ಚಿಲ್ಲರೆ ಬೆಲೆ (ಎಂಆರ್ಪಿ) 14 ಸಾವಿರ ಎಂಬುದಾಗಿ ಮುದ್ರಿಸಲಾಗಿತ್ತು. ಇದು ಕಾನೂನು ಮಾಪನ ಶಾಸ್ತ್ರ ನಿಯಮ 4(2)ರ ಅನುಗುಣಗಳಿಗೆ ವ್ಯತಿರಿಕ್ತವಾಗಿದೆ. ಅಲ್ಲದೆ, ಕಾನೂನು ಮಾಪನ ಇಲಾಖೆಯ ಸೆಕ್ಷನ್ 11ಕ್ಕೆ ವಿರುದ್ಧವಾಗಿತ್ತು ಎಂದು ಆರೋಪಿಸಿದ್ದರು.
ಅಲ್ಲದೆ ಮೂರು ಅಂಕಿಗಳಿಗೆ ಮೀರಿದ ಯಾವುದೇ ಸಂಖ್ಯೆಗೆ ದಶಮಾಂಶ ಬಿಂದು ತೆಗೆದುಕೊಂಡು ಎರಡೂ ಬದಿಗಳಲ್ಲಿ ಮೂರು ಗುಂಪುಗಳನ್ನಾಗಿ ವಿಂಗಡಿಸಬೇಕಾಗುತ್ತದೆ. ಅದಕ್ಕೆ ಬದಲಾಗಿ ಸಗಟು ವ್ಯಾಪಾರ ಪ್ಯಾಕೇಟ್‌ಗಳಿಗೆ ಒಂದು ಪ್ಯಾಕಿಗೆ ಒಂದು ಇರಬೇಕು. 20 ಪ್ರತ್ಯೇಕ ಪ್ಯಾಕ್ಗಳು ಇರುವ ಸಂದರ್ಭದಲ್ಲಿ ಎನ್ ಸಂಖ್ಯೆಯನ್ನು ನಮೂದಿಸಿರಬೇಕು. ಅದರ ಬದಲಿಗೆ 20 ಎಂಬುದಾಗಿ ಉಲ್ಲೇಖಿಸಲಾಗಿದ್ದು, ಇದೂ ಸಹ ಕಾನೂನು ಮಾಪನ ಇಲಾಖೆಯ ಪ್ಯಾಕೇಜಿಂಗ್ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು : ಈ ಸಂಬಂಧ ಮಾಪನ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸ್ಯಾಮ್ಸ್ಂಗ್ ಕಂಪನಿಯಿಂದ ಸವಿವರವಾದ ಉತ್ತರವನ್ನೂ ನೀಡಲಾಗಿತ್ತು. ಆದರೆ, ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಇಲ್ಲವಾದಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದ್ದರು. ಜತೆಗೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ನ್ಯಾಯಾಲಯ ಅರ್ಜಿದಾರ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿತ್ತು. ಇದು ಕಾನೂನು ಬಾಹಿರವಾಗಿ ಪ್ರಕರಣ ದಾಖಲಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸುವಂತೆ ಅರ್ಜಿದಾರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧದ ಸಾಕ್ಷಿಗಳ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ