ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹೆಸರನ್ನು ನಗರ ಪೊಲೀಸ್ ಆಯುಕ್ತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ನಗರದ ಹೆಬ್ಬಾಳ ನಿವಾಸಿ ಹೆಚ್.ಎಂ. ಖಲೀಲ್ ಅಹಮದ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿ ಪರಿಶೀಲಿಸಿದ ಪೀಠ, ಬಂಧಿತ ಆರೋಪಿಗಳ ಹೆಸರುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಸಿಆರ್‌ಪಿಸಿ ಸೆಕ್ಷನ್ 41ರ ಅಡಿಯಲ್ಲಿ ಅವಕಾಶವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸೆಕ್ಷನ್ 41 ರಲ್ಲಿ ಹೆಸರು ಪ್ರಕಟಿಸುವ ಸಂದರ್ಭವೇ ಬೇರೆ. ಪ್ರಸ್ತುತ ಸನ್ನಿವೇಶವೇ ಬೇರೆ. ಇಂತಹ ಪ್ರಕರಣಗಳಲ್ಲಿ ಹೆಸರು ಬಹಿರಂಗಪಡಿಸಿದರೆ ಮುಂದಾಗುವ ಪರಿಣಾಮಗಳ ಅರಿವಿದೆಯೇ ನಿಮಗೆ ಎಂದು ಪ್ರಶ್ನಿಸಿತು. ಮೇಲಾಗಿ ಈ ಪಿಐಎಲ್ ಉದ್ದೇಶವೇನೆಂಬುದೇ ತಿಳಿಯುತ್ತಿಲ್ಲ. ಅರ್ಜಿದಾರರು ಆರೋಪಿಗಳ ಪರವಿದ್ದಾರೆಯೇ ಅಥವಾ ವಿರುದ್ಧವಿದ್ದಾರೆಯೇ ಎಂಬುದು ಅರ್ಥವಾಗುತ್ತಿಲ್ಲ. ಒಂದು ವೇಳೆ ಅರ್ಜಿದಾರರ ಮನವಿ ಪುರಸ್ಕರಿಸಿದರೆ, ಬಂಧಿತರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ಇಂಥ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿತು.