ಬೆಂಗಳೂರು: ನಿವೇಶನಕ್ಕಾಗಿ ಪಾವತಿ ಮಾಡಬೇಕಿದ್ದ ಮೊತ್ತ ಕಟ್ಟಿಲ್ಲ ಎಂದು ತಪ್ಪಾಗಿ ತಿಳಿದು ಮಾಜಿ ಸೈನಿಕನ ಪತ್ನಿಗೆ ಮಂಜೂರು ಮಾಡಲಾಗಿದ್ದ ನಿವೇಶನ ರದ್ದುಪಡಿಸಲು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮೂಡಾ) ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್ ರದ್ದುಪಡಿಸಿದೆ. ಮೂಡಾ ಕ್ರಮ ಪ್ರಶ್ನಿಸಿ ದಿ.ಮಾಜಿ ಕರ್ನಲ್ ಜಿ.ಎಸ್. ಗರ್ಚಾ ಅವರ ಪತ್ನಿ ಸೂರ್ಯ ಪ್ರಭಾ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರ ಪೀಠ ಈ ಆದೇಶ ಮಾಡಿದೆ. ಮುಂದಿನ ಎರಡು ತಿಂಗಳೊಳಗೆ ಅರ್ಜಿದಾರರಿಗೆ ನಿವೇಶನದ ಕ್ರಯ ಮಾಡಿಕೊಡಬೇಕು ಮತ್ತು ಭೂ ಸ್ವಾಧೀನಾನುಭವ ಪತ್ರ ವಿತರಿಸಬೇಕು ಎಂದು ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಮಾಜಿ ಸೈನಿಕ ಕೋಟಾದಡಿ ದಿ.ಕರ್ನಲ್ ಜಿ.ಎಸ್. ಗರ್ಚಾ ಅವರ ಪತ್ನಿ ಸೂರ್ಯಪ್ರಭಗೆ ಮೈಸೂರಿನ ಹಂಚ್ಯ-ಸಟಗಾನಹಳ್ಳಿ ಬಿ-ಜೋನ್‌ನ ನಿವೇಶನ ಸಂಖ್ಯೆ-1644(50*80 ಅಡಿ ವಿಸ್ತೀರ್ಣ) ಅನ್ನು ಮೂರು ಲಕ್ಷ ರೂ.ಗೆ ಮಂಜೂರು ಮಾಡಲು 2001ರ ಫೆ.25ರಂದು ಮೂಡಾ ನಿರ್ಧರಿಸಿತ್ತು. ಪ್ರಭ ಆರಂಭಿಕ ಠೇವಣಿಯೆಂದು 4,374 ರೂ. ಪಾವತಿಸಿದ್ದರು. ಮಂಜೂರಾತಿ ಪತ್ರ ನೀಡಿದ ನಂತರದ 15 ದಿನಗಳಲ್ಲಿ 45,450 ರೂ. ಮತ್ತು ಉಳಿದ 2,53,176 ರೂ. ಅನ್ನು 90 ದಿನಗಳಲ್ಲಿ ಪಾವತಿಸುವಂತೆ ಮೂಡಾ ಸೂಚಿಸಿತ್ತು.
ಮಂಜೂರಾತಿ ಪತ್ರವನ್ನು 2001ರ ಫೆ.25ರಂದೇ ಸಿದ್ಧಪಡಿಸಿದ್ದ ಮೂಡಾ, ಅದನ್ನು 2001ರ ಮೇ 16ಕ್ಕೆ ಕಳುಹಿಸಲಾಗಿತ್ತು. 2001ರ ಜೂ.9ರಂದು 45,450 ರೂ ಮತ್ತು ಅ.13ರಂದು 1,10,000 ರೂ. ಡಿಡಿ ಮೂಲಕ ಪ್ರಭ ಪಾವತಿಸಿದ್ದರು. ಬಾಕಿ 1,43,146 ರೂ. ಅನ್ನು ಪಾವತಿಸಬೇಕಿತ್ತು. ಆದರೆ, ಹಲವು ತಿಂಗಳು ಕಳೆದರೂ ಬಾಕಿ ಮೊತ್ತ ಪಾವತಿಸಲು ಮೂಡಾಯಿಂದ ಯಾವುದೇ ಮಾಹಿತಿ ಸ್ವೀಕರಿಸದ ಹಿನ್ನೆಲೆಯಲ್ಲಿ 2003ರ ಫೆ.5ರಂದು 1,43,500 ರೂ.ಗೆ ಮತ್ತೊಂದು ಡಿಡಿ ಪಡೆದುಕೊಂಡ ಪ್ರಭ ಅವರು, ಮನವಿ ಪತ್ರದೊಂದಿಗೆ ಮೂಡಾಗೆ ಸಲ್ಲಿಸಿದ್ದರು.
ಆದರೆ, ಪ್ರಭಾ ಅವರ ಹೆಸರಿಗೆ ನಿವೇಶನ ಕ್ರಯ ಮಾಡಿಕೊಡುವ ಬದಲಾಗಿ 2005ರ ಜ.31ರಂದು ಮತ್ತೊಂದು ನೋಟಿಸ್ ನೀಡಿದ್ದ ಮೂಡಾ, ಬಾಕಿ ಮೊತ್ತವನ್ನು ಪಾವತಿಸುವಂತೆ ಸೂಚಿಸಿತ್ತು. ಅದನ್ನು ಪ್ರಭ ಅವರ ಹಳೆಯ ಮನೆ ವಿಳಾಸಕ್ಕೆ ಕಳುಹಿಸಲಾಗಿತ್ತು. ಅಂತಿಮವಾಗಿ ಬಾಕಿಮೊತ್ತ ಪಾವತಿಸಿಲ್ಲ ಎಂಬ ಕಾರಣಕ್ಕೆ ಪ್ರಭ ಅವರಿಗೆ ಮಂಜೂರು ಮಾಡಿದ್ದ ನಿವೇಶನವನ್ನು ರದ್ದುಪಡಿಸಲು ನಿರ್ಧರಿಸಿದ್ದ ಮೂಡಾ, ಆ ಕುರಿತು 2023ರ ಮಾ.27ರಂದು ಹಿಂಬರಹ ಹೊರಡಿಸಿತ್ತು. ಇದರಿಂದ ಪ್ರಭ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಎಸ್‌ಪಿಪಿಯಾಗಿ ಬೆಳ್ಳಿಯಪ್ಪ ನೇಮಕ: ರಾಜ್ಯದ ನೂತನ ರಾಜ್ಯ ಸರ್ಕಾರಿ ಅಭಿಯೋಜಕ(ಎಸ್‌ಪಿಪಿ)ರಾಗಿ ವಕೀಲರಾದ ಬಿ.ಎ.ಬೆಳ್ಳಿಯಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಬೆಳ್ಳಿಯಪ್ಪ ಹೈಕೋರ್ಟ್‌ನಲ್ಲಿ ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರಿ ಅಭಿಯೋಜಕ-2 ಹುದ್ದೆಗೆ ವಿಜಯಕುಮಾರ್‌ಗೆ ಮತ್ತು ಹೆಚ್ಚುವರಿ ಎಸ್‌ಪಿಪಿಯಾಗಿ ಬಿ.ಎನ್. ಜಗದೀಶ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ರಾಜ್ಯ ಅಭಿಯೋಜಕರಾಗಿದ್ದ ಕಿರಣ್ ಜವಳಿ ಹಾಗೂ ವಿ.ಎಸ್. ಹೆಗ್ಡೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ನೇಮಕಾತಿ ನಡೆದಿದೆ.
ಉದ್ಯಮಿ ವಿರುದ್ಧ ಪೊಲೀಸರಿಂದ ಸುಳ್ಳು ಪ್ರಕರಣ, ಕೇಸು ಹೈಕೋರ್ಟ್‌ನಲ್ಲಿ ವಜಾ: ಉದ್ಯಮಿ ಹರಿರಾಜ್ ಶೆಟ್ಟಿ ಅವರ ವಿರುದ್ಧ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತರಾಗಿ ದಾಖಲಿಸಿದ ಎಫ್‌ಐಅರ್ ಅನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತನ್ನ ವಿರುದ್ಧ ಎಫ್‌ಐಆರ್ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದು ಕೋರಿ ಹರಿರಾಜ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎನ್. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಸಿಆರ್‌ಪಿಸಿ 200 ಪ್ರಕಾರ ಮ್ಯಾಜಿಸ್ಟ್ರೇಟ್ಗೆ ಕಡ್ಡಾಯವಾಗಿ ದೂರು ನೀಡಬೇಕು. ಪೊಲೀಸರ ವರದಿ ಆಧಾರದ ಮೇಲೆ ತಮ್ಮ ವಿವೇಚನೆಯಂತೆ ಈ ರೀತಿಯ ಪ್ರಕರಣ ವಿಚಾರಣೆ ನಡೆಸುವ ಅಧಿಕಾರ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ತನ್ನ ತೀರ್ಪಿನಲ್ಲಿ ಹೇಳಿದೆ.
ಇದನ್ನೂ ಓದಿ: PSI scam: ಪಿಎಸ್‌ಐ ಹಗರಣದಲ್ಲಿ ಉತ್ತರ ಪತ್ರಿಕೆಗಳ ತಿದ್ದಲು ಅಮೃತ್ ಪೌಲ್ ಕಾರಣ.. ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್