ಬೆಂಗಳೂರು: ರಾಜ್ಯದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾ.17ಕ್ಕೆ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ: ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ, ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಅಲ್ಲದೇ, ತಪ್ಪು ಮಾಹಿತಿ ನೀಡುವ ಮೂಲಕ ಕೋರ್ಟ್ಗೆ ವಂಚನೆ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದವರಲ್ಲಿ ನಾಲ್ವರು ಜಿಲ್ಲಾಧಿಕಾರಿಗಳನ್ನು ಮನೆಗೆ ಕಳುಹಿಸಿದರೇ ಮಾತ್ರ ಈ ವ್ಯವಸ್ಥೆ ಸರಿಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ತರಾಟೆ ತೆಗೆದುಕೊಂಡ ನ್ಯಾಯಮೂರ್ತಿಗಳು: ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ಯಾವುದೇ ರೀತಿಯಲ್ಲಿಯೂ ಬೆಲೆ ಕೊಡುತ್ತಿಲ್ಲ. ಹಾಗಾಗಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಡಿಸಿ ಮುಂದಿನ ಕ್ರಮ ಜರುಗಿಸುವುದು ಬಿಟ್ಟರೆ, ಬೇರೆ ದಾರಿ ಕೋರ್ಟ್ ಮುಂದೆ ಇಲ್ಲ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.
319 ಗ್ರಾಮಗಳಿಗೆ ಸ್ಮಶಾನ ಸೌಲಭ್ಯವಿಲ್ಲ: 2023ರ ಜ.10ರಂದು ಅರ್ಜಿ ವಿಚಾರಣೆಗೆ ಬಂದಿದ್ದಾಗ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವರದಿ ಸಲ್ಲಿಸಿದ, ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಿಗೆ ಸ್ಮಶಾನಕ್ಕೆ ಜಮೀನು ಒದಗಿಸಲಾಗಿದೆ. 319 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 56 ಗ್ರಾಮಗಳಲ್ಲಿ ಆಗಿರುವ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಒಟ್ಟು 1,364 ಗ್ರಾಮಗಳು ಬೇಚರಾಕ್ ( ಜನ ವಸತಿ ಇಲ್ಲದ) ಗ್ರಾಮಗಳಾಗಿವೆ ಎಂದು ಮಾಹಿತಿ ನೀಡಿತ್ತು.
ಜಿಲ್ಲಾಧಿಕಾರಿಗಳಿಂದ ತಪ್ಪು ಮಾಹಿತಿ: ಹೈಕೋರ್ಟ್ ಸೂಚನೆ ಮೇರೆಗೆ ಈ ಮಾಹಿತಿಯ ವಾಸ್ತವಾಂಶ ಪರಿಶೀಲಿಸಿದ್ದ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು, ಸರ್ಕಾರ ತಪ್ಪು ಮಾಹಿತಿ ನೀಡಿದೆ. ಇನ್ನೂ 2,041 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕೊಟ್ಟಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತರಲಾಗಿದೆ. ಇದೇ ವೇಳೆ ಸರ್ಕಾರದ ಪರ ವಕೀಲರು , ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಒಪ್ಪಿಕೊಂಡರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ ಮುಂದಿನ ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳು ಖುದ್ದು ಹಾಜರಿರಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.
ಈ ಹಿಂದೆ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಗಮನಿಸಿದ್ದ ನ್ಯಾಯಪೀಠಕ್ಕೆ, ಸರ್ಕಾರದ ಅಂಕಿ-ಅಂಶಗಳಿಗೂ ಮತ್ತು ಪ್ರಾಧಿಕಾರ ಸಂಗ್ರಹಿಸಿದ ಮಾಹಿತಿಗೂ ವ್ಯತ್ಯಾಸವಿದೆ. ರಾಜ್ಯದಲ್ಲಿ ಒಟ್ಟು 2,9616 ಗ್ರಾಮಗಳಿದ್ದು, ಅದರಲ್ಲಿ 1,394 ‘ಬೇಚರಾಕ್’ ಗ್ರಾಮಗಳಿವೆ ಎಂದು ಸರ್ಕಾರ ಹೇಳಿದೆ. ಸರ್ಕಾರದ ವರದಿಯಲ್ಲಿ ಗ್ರಾಮಗಳ ಸಂಖ್ಯೆ ಹೇಳಲಾಗಿದೆಯೇ ಹೊರತು ಬೇಚರಾಕ್ ಗ್ರಾಮಗಳ ಪಟ್ಟಿ ಇಲ್ಲ ಎಂದು ಪ್ರಾಧಿಕಾರ ವಿವರಿಸಿತ್ತು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ವಿವರ ಕೋರಿ 4 ದೇಶಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಮನವಿ