ಬೆಂಗಳೂರು: ನಿವೃತ್ತ ಸೈನಿಕರೊಬ್ಬರ ಮಗಳು ಅರ್ಜಿ ಸಲ್ಲಿಸುವ ವೇಳೆ ಆಗಿದ್ದ ಸಣ್ಣ ತಪ್ಪನ್ನೇ ಆಧಾರವಾಗಿಟ್ಟುಕೊಂಡು ಮೀಸಲು ಸೌಲಭ್ಯವನ್ನೇ ನಿರಾಕರಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಸೀಟು ನೀಡುವಂತೆ ನಿರ್ದೇಶಿಸಿರುವ ಹೈಕೋರ್ಟ್, ಸೈನಿಕರ ಮಕ್ಕಳ ಬಗ್ಗೆ ಕೊಂಚ ಉದಾರತೆ ಇರಲಿ ಎಂದು ಸೂಚಿಸಿದೆ.
ಶಿವಮೊಗ್ಗದ ನಿವಾಸಿ ಹಾಗೂ ಮಾಜಿ ಸೈನಿಕ ಎಸ್.ವಿ ರವೀಂದ್ರ ಅವರ ಪುತ್ರಿ ಅಂಜಲಿ ಆರ್. ಎಂಜಿನಿಯರಿಂಗ್ ಕೋರ್ಸ್ ಸೇರಲು ಮೀಸಲು ಸೌಲಭ್ಯ ಕೋರಿದ್ದರು. ಆದರೆ ಅರ್ಜಿ ಸಲ್ಲಿಸುವ ವೇಳೆ ಮೀಸಲು ಸೌಲಭ್ಯದ ಕಾಲಂನಲ್ಲಿ ಸಣ್ಣ ತಪ್ಪಾಗಿತ್ತು. ಇದನ್ನೇ ಕಾರಣವಾಗಿಟ್ಟುಕೊಂಡು ವಿಶೇಷ ಪ್ರವರ್ಗ ಮೀಸಲು ಸೌಲಭ್ಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರಾಕರಿಸಿತ್ತು.
ಕೆಇಎ ನಿಲುವು ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ, ಸಣ್ಣ ತಾಂತ್ರಿಕ ತಪ್ಪನ್ನೇ ಕಾರಣವಾಗಿಟ್ಟುಕೊಂಡು ವಿದ್ಯಾರ್ಥಿನಿಗೆ ಮೀಸಲು ನೀಡದಿದ್ದರೆ ಮೀಸಲು ಉದ್ದೇಶವೇ ವಿಫಲವಾಗುತ್ತದೆ. ಅರ್ಜಿ ತಿರಸ್ಕರಿಸುವ ಮುನ್ನ ಅಭ್ಯರ್ಥಿ ಹಾಗೂ ಆಕೆಯ ಪೋಷಕರ ಜತೆ ಚರ್ಚಿಸಲು ಅವಕಾಶವಿತ್ತು. ಆದರೆ ಕೆಇಎ ಅಂತಹ ಕೆಲಸ ಮಾಡಿಲ್ಲ. ಹೀಗಾಗಿ ಮೀಸಲಾತಿ ನೀಡಬೇಕು ಎಂದು ಕೆಇಎಗೆ ನಿರ್ದೇಶಿಸಿದೆ.
ಅಲ್ಲದೆ ವಿದ್ಯಾರ್ಥಿನಿ ಬಯಸಿರುವುದು ಬಾರ್ಡರ್ ಸೆಕ್ಯೂರಿಟ್ ಫೋರ್ಸ್ ಆ್ಯಕ್ಟ್ 1968ರ ಅಡಿ ಲಭ್ಯವಿರುವ ಮೀಸಲು ಸೌಲಭ್ಯವನ್ನು. ಆಕೆಯ ತಂದೆ ದೇಶಕ್ಕಾಗಿ 20 ವರ್ಷಗಳ ಕಾಲ ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಸೈನಿಕರ ಮಕ್ಕಳ ವಿಚಾರದಲ್ಲಿ ಅಧಿಕಾರಿಗಳು ಉದಾರತೆ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿದೆ. ಮಾಜಿ ಯೋಧ ಎಸ್.ವಿ.ರವೀಂದ್ರ ಅವರು 1997ರ ಫೆಬ್ರವರಿಯಿಂದ 2017ರ ಮೇ ತಿಂಗಳವರೆಗೆ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸಿದ್ದಾರೆ.