ಬೆಂಗಳೂರು: ಎಲ್ಲಾ ನೌಕರರೂ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಅಂಧ ನೌಕರರ ವಿಷಯದಲ್ಲಿ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ವಿಕಲಚೇತನರು ಹಾಗೂ ಅಂಧ ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿ ಕೇಂದ್ರ ಸರ್ಕಾರ ಅನುಮತಿಸಿದ್ದರೂ, ರಾಜ್ಯ ಸರ್ಕಾರ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದೆ. ಇದರಿಂದ ವಿನಾಯಿತಿ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಅಂಧರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮೇ 18ರಂದು ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಬೇಕು. ವಿಕಲಚೇತನರ ಸಬಲೀಕರಣ ಹಕ್ಕುಗಳ ಅಡಿ ತನ್ನ ನಿರ್ಧಾರ ಮರುಪರಿಶೀಲಿಸಿ ಡಿ. 11ರೊಳಗೆ ತನ್ನ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿತು.
ವಿಕಲಚೇತನರು, ವಿಶೇಷವಾಗಿ ಅಂಧರು ಕಚೇರಿಗೆ ಹಾಜರಾಗಿ ಕೆಲಸ ನಿರ್ವಹಿಸಲು ಕೋವಿಡ್ ಸಂದರ್ಭದಲ್ಲಿ ಕಷ್ಟ. ಹಾಗೆಯೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೇ 18ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಲು ಅಥವಾ ಪರಿಷ್ಕರಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.