ಬೆಂಗಳೂರು: ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ.
ಈ ಕುರಿತು ಲೆಟ್ಜ್ ಕಿಟ್ ಫೌಂಡೇಶನ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು, ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಜನರಷ್ಟೇ ಅಲ್ಲದೆ, ಪೊಲೀಸ್ ಠಾಣೆಗಳು, ಬಿಎಂಟಿಸಿ ಹಾಗೂ ಬಿಎಂಆರ್ ಸಿಎಲ್ ಸಂಸ್ಥೆಗಳು ಕೂಡ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿವೆ. ಫುಟ್ಪಾತ್ ಆಕ್ರಮಿಸಿಕೊಂಡು ಜನರ ಓಡಾಟಕ್ಕೆ ಅಡ್ಡಿ ಉಂಟು ಮಾಡುತ್ತಿವೆ ಎಂದು ಆರೋಪಿಸಿದರು.
ವಾದ ಪರಿಗಣಿಸಿದ ಪೀಠ, ಈ ಸಂಬಂಧ ಪರಿಶೀಲನೆ ನಡೆಸಲು ಬಿಬಿಎಂಪಿ ಓರ್ವ ಅಧಿಕಾರಿಯನ್ನು ನೇಮಕ ಮಾಡಬೇಕು. ಅವರು ಅರ್ಜಿದಾರರು ಆರೋಪಿಸಿರುವ ಪ್ರದೇಶಗಳಲ್ಲಿ ಪರಿಶೀಲಿಸಿ ವರದಿ ನೀಡಬೇಕು ಎಂದು ಪಾಲಿಕೆಗೆ ನಿರ್ದೇಶಿಸಿತು. ಹಾಗೆಯೇ, ನಗರ ಪೊಲೀಸರು, ಬಿಎಂಟಿಸಿ, ಬಿಎಂಆರ್ ಸಿಎಲ್, ಬೆಸ್ಕಾಂಗಳು ಕೂಡ ಈ ಸಂಬಂಧ ಗಮನ ಹರಿಸಿ ಒತ್ತುವರಿ ತೆರವು ಮಾಡಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು. ಅರ್ಜಿದಾರರು, ನಗರದ ಬಹುತೇಕ ಕಡೆ ಜನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿದ್ದಾರೆ. ಜನರಷ್ಟೇ ಅಲ್ಲದೇ ಪೊಲೀಸರು ತಮ್ಮ ಠಾಣೆಗಳ ಮುಂಭಾಗದಲ್ಲಿ ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸಿದ್ದು, ಜನರ ಮುಕ್ತ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ.
ಮೆಟ್ರೋ ಸ್ಟೇಷನ್ಗಳ ಸುತ್ತಮುತ್ತ ಫುಟ್ಪಾತ್ಗಳಲ್ಲೇ ಜನ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಾರೆ. ಬಿಎಂಆರ್ಸಿಎಲ್ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡದಿರುವುದೇ ಇದಕ್ಕೆ ಕಾರಣ. ನಗರದ 45 ಮೆಟ್ರೋ ರೈಲು ಸ್ಟೇಷನ್ಗಳ ಪೈಕಿ 3 ಸ್ಟೇಷನ್ಗಳಲ್ಲಿ ಮಾತ್ರ ದ್ವಿಚಕ್ರ ಮತ್ತು ಕಾರುಗಳನ್ನು ನಿಲುಗಡೆ ಮಾಡಬಹುದು. 17 ಸ್ಟೇಷನ್ಗಳಲ್ಲಿ ಕೇವಲ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಬಹುದು. ಇನ್ನುಳಿದ ಸ್ಟೇಷನ್ಗಳಲ್ಲಿ ಪಾರ್ಕಿಂಗ್ಗೆ ಜಾಗವೇ ಇಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.