ಬೆಂಗಳೂರು : ನೋಂದಣಿ ನವೀಕರಣ ಮಾಡಿಸಿಕೊಳ್ಳದೆ ಔಷಧ ಮಾರಾಟ ಮಾಡುತ್ತಿರುವ ಫಾರ್ಮಾಸಿಸ್ಟ್ಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ವಿವರ ಸಲ್ಲಿಸುವಂತೆ ಹೈಕೋರ್ಟ್ ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್ಗೆ ನಿರ್ದೇಶಿಸಿದೆ.
ಈ ಕುರಿತು ಕೊಪ್ಪಳ ಜಿಲ್ಲಾ ಕೆಮಿಸ್ಟ್ ಅಂಡ್ ಡ್ರಗ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಶೀಲವಂತ ವಾದ ಮಂಡಿಸಿ, ರಾಜ್ಯದಲ್ಲಿ ಫಾರ್ಮಸಿ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. 40000ಕ್ಕೂ ಹೆಚ್ಚು ಫಾರ್ಮಸಿಸ್ಟ್ಗಳು ತಮ್ಮದು ಶಾಶ್ವತ ನೋಂದಣಿ ಎಂದು ಹೇಳುತ್ತಾರೆ. ಆದರೆ, ಕಾಯ್ದೆಯಲ್ಲಿ ಶಾಶ್ವತ ನೋಂದಣಿಗೆ ಅವಕಾಶವಿಲ್ಲ. ಅಂತೆಯೇ 2012ರಿಂದ ಫಾರ್ಮಸಿ ಇನ್ಸ್ಪೆಕ್ಟರ್ಗಳ ನೇಮಕವಾಗಿಲ್ಲ. ಹೀಗಾಗಿ ನೋಂದಣಿ ನವೀಕರಣ ಮಾಡಿಸಿಕೊಳ್ಳದಿದ್ದರೂ ಫಾರ್ಮಸಿಸ್ಟ್ಗಳು ಔಷಧ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಫಾರ್ಮಸಿ ಕೌನ್ಸಿಲ್ನ ರಿಜಿಸ್ಟ್ರಾರ್ ಪಿಎಸ್ ಭಗವಾನ್ ಅವರ ಪ್ರಮಾಣ ಪತ್ರವನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ರಾಜ್ಯದಲ್ಲಿ ಫಾರ್ಮಸಿ ಕಾಯ್ದೆ 1948, ಕೆಮಿಸ್ಟ್ ಅಂಡ್ ಡ್ರಗ್ಸ್ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 2011ರ ಮಾಹಿತಿಯಂತೆ ರಾಜ್ಯದಲ್ಲಿ 48000 ಫಾರ್ಮಸಿಸ್ಟ್ಗಳಿದ್ದಾರೆ. ಇದರಲ್ಲಿ 5601 ಫಾರ್ಮಸಿಸ್ಟ್ಗಳು ನೋಂದಣಿ ನವೀಕರಿಸಿಕೊಂಡಿದ್ದಾರೆ. ಇನ್ನು 184 ಫಾರ್ಮಸಿ ಇನ್ಸ್ಪೆಕ್ಟರ್ಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಕಾಯ್ದೆಯಲ್ಲಿ ಪ್ರಾಸಿಕ್ಯೂಷನ್ ನಡೆಸಲು ಇನ್ಸ್ಪೆಕ್ಟರ್ಗಳಿಗೆ ಅಧಿಕಾರ ಇಲ್ಲದ ಕಾರಣ ನೇಮಕಾತಿಯನ್ನು ಮುಂದುವರಿಸಿದೆ ಎಂದು ತಿಳಿಸಿದರು.
ಸರ್ಕಾರದ ಲಿಖಿತ ಹೇಳಿಕೆ ದಾಖಲಿಸಿಕೊಂಡ ಪೀಠ, ನೋಂದಣಿ ನವೀಕರಣ ಮಾಡಿಸಿಕೊಳ್ಳದ ಫಾರ್ಮಸಿಸ್ಟ್ಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ವಿವರ ಸಲ್ಲಿಸುವಂತೆ ಹಾಗೂ ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಿಕೊಳ್ಳದಿರುವ ನಿರ್ಣಯವನ್ನು ಮರು ಪರಿಶೀಲಿಸುವಂತೆ ಕರ್ನಾಟಕ ಫಾರ್ಮಸಿ ಕೌನ್ಸಿಲ್ಗೆ ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿತು.