ಬೆಂಗಳೂರು: ಎನ್‌ಡಿಪಿಎಸ್ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಇಲ್ಲದೆ ಅಂತಿಮ ತನಿಖಾ ವರದಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಆರೋಪಿಗೆ ಕಡ್ಡಾಯವಾಗಿ ಜಾಮೀನು ನೀಡಬೇಕು ಎನ್ನಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.ಸಯ್ಯದ್ ಮೊಹಮ್ಮದ್ ಅಲಿಯಾಸ್ ನಾಸಿಮ್ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಎಫ್‌ಎಸ್‌ಎಲ್ ವರದಿ ಸಲ್ಲಿಸಿಲ್ಲ ಎಂಬ ಮಾತ್ರಕ್ಕೆ ದೋಷಾರೋಪ ಪಟ್ಟಿ ದೋಷದಿಂದ ಕೂಡಿದೆ ಎನ್ನಲಾಗುವುದಿಲ್ಲ. ಹಾಗೆಯೇ, ಇಂತಹ ದೋಷಾರೋಪಣೆ ಮುಂದಿಟ್ಟುಕೊಂಡು ಆರೋಪಿ ಜಾಮೀನು ಪಡೆಯುವ ಹಕ್ಕು ಹೊಂದಿರುತ್ತಾನೆ ಎಂದು ಭಾವಿಸಲೂ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಂಬ್ಯುಲೆನ್ಸ್‌ನಲ್ಲಿದ್ದ ಆಕ್ಸಿಜನ್ ಖಾಲಿ: ಉಸಿರು ನಿಲ್ಲಿಸಿದ ಬಾಣಂತಿ!
ಸಿಆರ್‌ಪಿಸಿ ಸೆಕ್ಷನ್ 173(8)ರಲ್ಲಿ ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ. ಅದಕ್ಕೆ ಅವಕಾಶ ಮಾಡಿಕೊಟ್ಟರೆ ಪೊಲೀಸರು ಮತ್ತಷ್ಟು ದಾಖಲೆ ಸಲ್ಲಿಸುತ್ತಾರೆ. ಹೆಚ್ಚಿನ ತನಿಖೆಯನ್ನು ನಡೆಸಿ ಸಲ್ಲಿಸುವ ವರದಿಯೊಂದಿಗೆ ಎಫ್‌ಎಸ್‌ಎಲ್ ವರದಿಯನ್ನೂ ಸಲ್ಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಯ್ಯದ್ ಮೊಹಮ್ಮದ್ ಕಾರಿನಲ್ಲಿ 60 ಕೆಜಿ ತೂಕದ ಗಾಂಜಾ ಸಂಗ್ರಹಿಸಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 8(ಸಿ), 20(2)(ಸಿ) ಮತ್ತು ಭಾರತೀಯ ಸಶಸ್ತ್ರ ಕಾಯ್ದೆ -1959ರ ಸೆಕ್ಷನ್ 25 ಮತ್ತು 3ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ಬಳಿಕ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.ಅರ್ಜಿದಾರನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹಸ್ಮತ್ ಪಾಷಾ, ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯು ಅಪೂರ್ಣ ಹಾಗೂ ದೋಷಪೂರಿತವಾಗಿದೆ.
ಅರ್ಜಿದಾರನಿಂದ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಗಾಂಜಾ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಎಫ್‌ಎಸ್‌ಎಲ್ ವರದಿ ಇನ್ನೂ ಬರಬೇಕಿದೆ. ಹೀಗಾಗಿ, ವಶಪಡಿಸಿಕೊಂಡಿದ್ದಾರೆ ಎನ್ನಲಾದ ವಸ್ತುವನ್ನು ನಿಖರವಾಗಿ ಪತ್ತೆ ಹೆಚ್ಚಿಲ್ಲ. ಜಾಮೀನು ಪಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸರು ತರಾತುರಿಯಲ್ಲಿ ಅಪೂರ್ಣವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದು ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 167ರ ಉಲ್ಲಂಘನೆಯಾಗಿದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.