ಬೆಂಗಳೂರು: ವೃತ್ತಿನಿರತ ವಕೀಲರ ಪೋಷಕರನ್ನೂ ಕೇಂದ್ರ ಸರ್ಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಚಾರ ಕುರಿತಂತೆ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್) ಹೈಕೋರ್ಟ್ ಪರಿವರ್ತಿಸಿದೆ. ತುಮಕೂರು ಮೂಲದ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಎತ್ತಿರುವ ವಿಷಯದಲ್ಲಿ ದೊಡ್ಡ ಸಾಮಾಜಿಕ ಕಳಕಳಿ ಇದೆ. ಇದರಿಂದ ಈ ತಕರಾರು ಅರ್ಜಿಯನ್ನು ಪಿಐಎಲ್ ಆಗಿ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅರ್ಜಿಯನ್ನು ಸಂಬಂಧಿಸಿದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ಸೂಚಿಸಿದೆ.
ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ವಕೀಲ ಎಲ್.ರಮೇಶ್ ನಾಯಕ್, ವೃತ್ತಿನಿರತ ವಕೀಲರಿಗೆ ವಿಮಾ ಸೌಲಭ್ಯ ಒದಗಿಸುವ ವಿಚಾರವಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದೊಂದಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಲವು ಸುತ್ತಿನ ಸಭೆ ನಡೆಸಿ ಚರ್ಚಿಸಿದೆ. ಕೇಂದ್ರ ಸರ್ಕಾರವು ವಿಮಾ ಯೋಜನೆ ರೂಪಿಸಲು ಸಮ್ಮತಿಸಿದೆ. ವೃತ್ತಿನಿರತ ವಕೀಲರ ಮಾಹಿತಿ ಒದಗಿಸುವಂತೆ ಎಲ್ಲ ರಾಜ್ಯಗಳ ವಕೀಲರ ಪರಿಷತ್ಗೆ ಬಿಸಿಐ ಸೂಚಿಸಿದೆ.
ಬಿಸಿಐ ಸೂಚನೆಯಂತೆ ಕರ್ನಾಟಕ ವಕೀಲರ ಪರಿಷತ್ ಸಹ ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ಪತ್ರ ಬರೆದು, ಸಂಘದ ಎಲ್ಲ ಸದಸ್ಯರ ಹೆಸರು, ವಯಸ್ಸು, ಅವರ ಸಂಗಾತಿ (ಪತಿ/ಪತ್ನಿ) ಮತ್ತು ಮಕ್ಕಳ ಹೆಸರುಗಳನ್ನು ಒದಗಿಸುವಂತೆ ಸೂಚಿಸಿದೆ. ಆದರೆ, ವಕೀಲರ ಪೋಷಕರನ್ನು ವಕೀಲರ ಅವಲಂಬಿತರಾಗಿ ಪರಿಗಣಿಸುತ್ತಿಲ್ಲ. ವಕೀಲರ ಪೋಷಕರನ್ನು ವಿಮಾ ಯೋಜನೆ ವ್ಯಾಪ್ತಿಗೆ ತರಬೇಕಿದೆ. ಈ ಕುರಿತಂತೆ ಕರ್ನಾಟಕ ವಕೀಲ ಪರಿಷತ್ಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ವಕೀಲರ ವಿಮಾ ಯೋಜನೆ ವ್ಯಾಪ್ತಿಗೆ ಪೋಷಕರನ್ನು ತರುವಂತೆ ರಾಜ್ಯ ಸರ್ಕಾರ, ಭಾರತೀಯ ವಕೀಲರ ಪರಿಷತ್ ಮತ್ತು ಕರ್ನಾಟಕ ವಕೀಲರ ಪರಿಷತ್ಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳಿಗೆ ಗೌರವ ಧನ : ಮಧ್ಯಂತರ ತಡೆ ನೀಡಿದ ಹೈಕೋರ್ಟ್
ನಗರದ ಸಂಜಯಗಾಂಧಿ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಸ್ನಾತಕೋತ್ತರ ಮತ್ತು ಹಿರಿಯ ನಿವಾಸಿ ವೈದ್ಯಾಧಿಕಾರಿ ಪದವಿಯ 46 ವೈದ್ಯ ವಿದ್ಯಾರ್ಥಿಗಳಿಗೆ ಮಾಸಿಕ ಗೌರವ ಧನ ಹೆಚ್ಚಿಸಲು ಸರ್ಕಾರಕ್ಕೆ ನಿರ್ದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದ್ದ ತಕರಾರು ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು?: ಕೊರೊನಾ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂ.ಎಸ್ ಆರ್ಥೋ ಮತ್ತು ಹಿರಿಯ ನಿವಾಸಿ ವೈದ್ಯಾಧಿಕಾರಿಗಳಾಗಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ 2020ರ ಮೇ 16ರಿಂದ ಅನ್ವಯವಾಗುವಂತೆ ಮಾಸಿಕ ಗೌರವಧನವನ್ನು 30 ಸಾವಿರದಿಂದ 60 ಸಾವಿರದವರೆಗೆ ಹೆಚ್ಚಿಸಿ 2021ರ ಫೆ.23ರಂದು ಆದೇಶಿಸಿತ್ತು.
ಈ ಆದೇಶವನ್ನು 2018ರಿಂದ 2020ರ ನಡುವೆ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರದಲ್ಲಿ ಎಂ.ಎಸ್.ಆರ್ಥೋಪೆಡಿಕ್ಸ್ ಸ್ನಾತಕೋತ್ತರ ಮತ್ತು ಹಿರಿಯ ನಿವಾಸಿ ವೈದ್ಯಾಧಿಕಾರಿ ಪದವಿಗೆ (ಆರ್ಎಂಓ) ಪ್ರವೇಶ ಪಡೆದಿದ್ದ ಡಾ.ಎಚ್. ನಾಗರಾಜು ಸೇರಿದಂತೆ 46 ಮಂದಿಗೆ ವೈದ್ಯ ವಿದ್ಯಾರ್ಥಿಗಳಿಗೆ ಅನ್ವಯಿಸಿರಲಿಲ್ಲ. ಜೊತೆಗೆ, ಮಾಸಿಕ ಗೌರವ ಧನ ಹೆಚ್ಚಿಸಲು ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ 2021ರ ಏ.23ರಂದು ತಿರಸ್ಕರಿಸಿತ್ತು. ಇದರಿಂದ ಅವರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ನಾಗರಾಜು ಮತ್ತಿತರರ ಅರ್ಜಿದಾರರಿಗೆ (ಸರ್ಕಾರದ ಮೇಲ್ಮನವಿಯಲ್ಲಿನ ಪ್ರತಿವಾದಿಗಳು) 2020ರ ಮೇ 6ರಿಂದ ಅನ್ವಯವಾಗುವಂತೆ ಪರಿಷ್ಕೃತ ಗೌರವ ಮತ್ತು ಹಿಂಬಾಕಿ ಪಾವತಿಸುವಂತೆ ಸರ್ಕಾರಕ್ಕೆ 2022ರ ಆ.22ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ವಿಭಾಗೀಯ ಪೀಠ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಗೌರವ ಧನ ಹೆಚ್ಚಿಸಿದ ಆದೇಶವು ಕೊರೊನಾ ತುರ್ತು ಪರಿಸ್ಥಿತಿಯ ಕರ್ತವ್ಯದಲ್ಲಿ ತೊಡಗಿಕೊಂಡ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಸರ್ಕಾರಿ ಸ್ವಾಮ್ಯದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಆದರೆ, ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಸಂಸ್ಥೆಯ ಎಂ.ಎಸ್. ಆರ್ಥೋ ಮತ್ತು ಹಿರಿಯ ನಿವಾಸಿ ವೈದಾಧಿಕಾರಿಗಳು ಕೋವಿಡ್-19 ಕರ್ತವ್ಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಮೇಲಾಗಿ ಅವರು 2021ರ ನ.23ರವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ಇರಲಿಲ್ಲ. 2021ರ ನ.23ರಂದು ಸರ್ಕಾರ ಅದೇಶ ಹೊರಡಿಸಿ, ಅವರನ್ನು ಇಲಾಖೆ ವ್ಯಾಪ್ತಿಗೆ ತರಲಾಗಿತ್ತು. ಇದರಿಂದ ಅವರಿಗೆ ಸರ್ಕಾರ ಆದೇಶವು ಅನ್ವಯಿಸುವುದಿಲ್ಲ. ಹೀಗಾಗಿ ಏಕ ಸದಸ್ಯ ಪೀಠದ ಆದೇಶ ರದ್ದು ಪಡಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.
ಇದನ್ನೂ ಓದಿ: ಅಪಘಾತ ಪ್ರಕರಣ: ಯುಕೆ ನ್ಯಾಯಾಲಯದ ಆದೇಶ ಜಾರಿಗೊಳಿಸಲಾಗದು ಎಂದ ಹೈಕೋರ್ಟ್