ಹೈದರಾಬಾದ್: ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ಚಿರಂಜೀವಿ ಅವರು ಭಾರತೀಯ ಚಲನಚಿತ್ರೋದ್ಯಮದಲ್ಲಿ ''ಅತ್ಯಂತ ಸಮೃದ್ಧ ತಾರೆ'' ಎಂದು ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಭಾನುವಾರ ಸ್ವೀಕರಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರತಿನಿಧಿಯೋರ್ವರು ಚಿರಂಜೀವಿ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. "ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಸಮೃದ್ಧ ತಾರೆ/ನರ್ತಕ ಕೊನಿಡೆಲಾ ಚಿರಂಜೀವಿ ಅಕಾ ಮೆಗಾ ಸ್ಟಾರ್ (ಭಾರತ) 20 ಸೆಪ್ಟೆಂಬರ್ 2024 ರಂದು ಸಾಧಿಸಿದ್ದಾರೆ" ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನೀಡಿದ ಪ್ರಮಾಣಪತ್ರ ತಿಳಿಸಿದೆ.
"ನಾನು ಗಿನ್ನೆಸ್ ದಾಖಲೆ ಗೌರವಕ್ಕೆ ಪಾತ್ರನಾಗುತ್ತೇನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಇಷ್ಟು ವರ್ಷಗಳ ನನ್ನ ಸಿನಿಮಾ ವೃತ್ತಿಜೀವನದಲ್ಲಿ ನೃತ್ಯ ನನ್ನ ಜೀವನದ ಭಾಗವಾಗಿತ್ತು" ಎಂದು ಚಿರಂಜೀವಿ ತಿಳಿಸಿದ್ದಾರೆ. ಜೊತೆಗೆ, ಗೌರವಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. "ಮೆಗಾ ಸ್ಟಾರ್ ಚಿರಂಜೀವಿ ಅವರು 45 ವರ್ಷಗಳಲ್ಲಿ 156 ಚಿತ್ರಗಳು - 537 ಹಾಡುಗಳಲ್ಲಿ 24,000 ಡ್ಯಾನ್ಸ್ ಸ್ಟೆಪ್ಸ್ ಮಾಡಿದ್ದಾರೆ" ಎಂದು ನಟನ ನಿಕಟ ಮೂಲಗಳು ತಿಳಿಸಿವೆ. ಅಲ್ಲದೇ 1978ರಲ್ಲಿ ಮೆಗಾ ಸ್ಟಾರ್ ಚಿತ್ರರಂಗ ಪ್ರವೇಶಿಸಿದ ದಿನವೂ ಸೆಪ್ಟೆಂಬರ್ 22 ಆಗಿದೆ ಎಂದು ಅವರು ತಿಳಿಸಿದ್ದಾರೆ.
ಸೌತ್ ಸೂಪರ್ ಸ್ಟಾರ್ ಚಿರಂಜೀವಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್, ನಾನು ಚಿರಂಜೀವಿ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. "ನಾನು ಚಿರಂಜೀವಿ ಅವರನ್ನು ನನ್ನ ಅಣ್ಣನಂತೆ ನೋಡುತ್ತೇನೆ. ಚಿರಂಜೀವಿ ಅವರಿಗೆ ಈ ಗೌರವ ಸಂದಿದ್ದು, ನನಗೆ ಬಹಳ ಸಂತೋಷವಾಗಿದೆ. ನಾನು ನಿಜವಾಗಿಯೂ ರೋಮಾಂಚನಗೊಂಡಿದ್ದೆ. ಅವರ ಯಾವುದೇ ಹಾಡಿನಲ್ಲಿ ಅವರನ್ನು ಗಮನಿಸಿದರೆ, ಅವರು ಹೃದಯತುಂಬಿ ಸ್ಟೆಪ್ ಹಾಕಿರೋದನ್ನು ಕಾಣಬಹುದು, ಜೊತೆಗೆ ತಮ್ಮನ್ನು ತಾವು ಎಂಜಾಯ್ ಮಾಡುತ್ತಾರೆ" ಎಂದು ಗುಣಗಾನ ಮಾಡಿದರು.
ರಿಷಬ್ ಶೆಟ್ಟಿ ಪೋಸ್ಟ್: ಚಿರಂಜೀವಿ ಅವರು ವೇದಿಕೆಯಲ್ಲಿ ಗೌರವಕ್ಕೆ ಪಾತ್ರರಾದ ಕ್ಷಣವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ರಿಷಬ್ ಶೆಟ್ಟಿ, 156 ಚಲನಚಿತ್ರಗಳಿಂದ ಹಿಡಿದು 24,000ಕ್ಕೂ ಹೆಚ್ಚು ಐಕಾನಿಕ್ ಡ್ಯಾನ್ಸ್ ಮೂವ್ಸ್ ಮತ್ತು 537 ಮರೆಯಲಾಗದ ಹಾಡುಗಳು - ಮೆಗಾಸ್ಟಾರ್ ಚಿರಂಜೀವಿ ಕೊನಿಡೆಲಾ ಅವರು ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸುವುದನ್ನು ಮುಂದುವರೆಸಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಮೆಗಾ ಸ್ಟಾರ್‌ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಟ್ವೀಟ್ ಮೂಲಕ ಚಿರಂಜೀವಿ ಅವರನ್ನು ಅಭಿನಂದಿಸಿದ್ದಾರೆ. ಜನಪ್ರಿಯ ಚಲನಚಿತ್ರ ನಟ ಕೊನಿಡೆಲಾ ಚಿರಂಜೀವಿ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವುದು ತೆಲುಗು ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಚಿರಂಜೀವಿ ದಕ್ಷಿಣ ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡದಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಕರ್ ಪ್ರವೇಶಿಸಿದ 'ಲಾಪತಾ ಲೇಡೀಸ್': ನಿರ್ದೇಶಕಿ ಕಿರಣ್ ರಾವ್ ಮನದ ಮಾತು ಹೀಗಿದೆ - Kiran Rao
ರುದ್ರ ವೀಣ, ಇಂದ್ರ, ಟ್ಯಾಗೋರ್, ಸ್ವಯಂ ಕೃಷಿ, ಸೈ ರಾ ನರಸಿಂಹ ರೆಡ್ಡಿ, ಸ್ಟಾಲಿನ್ ಮತ್ತು ಗ್ಯಾಂಗ್ ಲೀಡರ್ ನಟನ ಸೂಪರ್ ಹಿಟ್ ಸಿನಿಮಾಗಳು. ಈ ವರ್ಷದ ಮೇನಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದರು. ಈ ಹಿಂದೆ 2006ರಲ್ಲಿ ನಟನಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.