ನಳಂದಾ (ಬಿಹಾರ): ಇಲ್ಲಿನ ಆಸ್ಪತ್ರೆಯಲ್ಲಿನ ಸ್ನಾನಗೃಹದಲ್ಲಿ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಎಷ್ಟೇ ಪ್ರಯತ್ನಪಟ್ಟರೂ ಆತ ಎಚ್ಚರವಾಗಿರಲಿಲ್ಲ. ಇದರಿಂದ ಮೃತಪಟ್ಟಿದ್ದಾನೆ ಎಂದು ಪರಿಗಣಿಸಿ ವೈದ್ಯರು ಮತ್ತು ಪೊಲೀಸರು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದರು. ಈ ವೇಳೆ, ಆ ವ್ಯಕ್ತಿ ದಿಢೀರ್ ಎದ್ದು ಕುಳಿತಿದ್ದಾನೆ. ಇದು ಎಲ್ಲರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಘಟನೆಯ ವಿವರ: ಸ್ವಚ್ಛತಾ ಸಿಬ್ಬಂದಿ ಆಸ್ಪತ್ರೆಯಲ್ಲಿನ ಸ್ನಾನಗೃಹವನ್ನು ಶುಚಿ ಮಾಡಲು ಬಂದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ವ್ಯಕ್ತಿಯ ಚಪ್ಪಲಿ ಹೊರಗೆ ಬಿದ್ದಿದ್ದವು. ಬಹಳ ಸಮಯ ಕಳೆದರೂ ಆತ ಬಾಗಿಲು ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿ ಆರಕ್ಷಕರು ಬಾಗಿಲು ಒಡೆದಿದ್ದಾರೆ. ಈ ವೇಳೆ, ವ್ಯಕ್ತಿಯೊಬ್ಬ ಸ್ನಾನಗೃಹದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿರುವುದು ಕಂಡು ಬಂದಿದೆ.
ಆತನನ್ನು ಎಚ್ಚರಿಸಲು ಪೊಲೀಸರು ಮತ್ತು ವೈದ್ಯ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಆದರೆ, ಎಚ್ಚರಗೊಂಡಿರಲಿಲ್ಲ. ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಕೂಡ ತಪಾಸಣೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದರು. ವ್ಯಕ್ತಿಯನ್ನು ಸಾಗಿಸಲು ಸ್ಟ್ರೆಚರ್ ತರಲಾಯಿತು. ಈ ವೇಳೆ ಶಬ್ಧ ಕೇಳಿದ ವ್ಯಕ್ತಿ ದಿಢೀರ್ ಎದ್ದು ಕುಳಿತಿದ್ದಾನೆ.
ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ ಎದ್ದು ಕುಳಿತಿದ್ದು ಕಂಡು ಎಲ್ಲರಲ್ಲೂ ಅಚ್ಚರಿ ಉಂಟಾಗಿದೆ. ಈ ವೇಳೆ ಆತನನ್ನು ವಿಚಾರಿಸಿದಾಗ, ಔಷಧ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದೆ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದೆ ಎಂದು ತಿಳಿಸಿದ್ದಾನೆ. ಇನ್ನೂ, ಈ ವ್ಯಕ್ತಿ ಪಾನಮತ್ತನಾಗಿದ್ದ ಎಂದು ಅಲ್ಲಿದ್ದವರು ಆರೋಪಿಸಿದ್ದಾರೆ.
ವ್ಯಕ್ತಿ ಹೇಳೋದೇನು?: ತನ್ನ ಹೆಸರು ರಾಕೇಶ್. ಆಸ್ತಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿರೈನ್ ಗ್ರಾಮದವ. ನಾನು ಔಷಧ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದೆ. ಆದರೆ, ಇಲ್ಲಿ ಹೇಗೆ ಬಿದ್ದಿದ್ದೇನೆ ಎಂದು ಗೊತ್ತಿಲ್ಲ. ನಾನು ಮದ್ಯಪಾನ ಮಾಡಿಲ್ಲ. ನನಗೆ ಏನಾಗಿದೆ ಎಂದು ಗೊತ್ತಿಲ್ಲ ಎಂದು ಆತ ತಿಳಿಸಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಬಿಯಾಸ್ ಪ್ರಸಾದ್, ಸ್ನಾನಗೃಹದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಮಾಹಿತಿ ಬಂದಿತು. ಈ ವೇಳೆ ಅಲ್ಲಿಗೆ ಹೋಗಿ ನೋಡಿದಾಗ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಆತನನ್ನು ಎಚ್ಚರಿಸಲು ಮುಂದಾದರೂ, ಪ್ರಜ್ಞೆ ಬಂದಿರಲಿಲ್ಲ. ಹೃದಯಾಘಾತವಾಗಿರುವ ಸಾಧ್ಯತೆ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಮುಂದಾದಾಗ, ಆತ ಎದ್ದು ಕುಳಿತಿದ್ದಾನೆ. ಸದ್ಯ ಆತನನ್ನು ತಪಾಸಣೆ ನಡೆಸಲಾಗಿದ್ದು, ಉತ್ತಮವಾಗಿದ್ದಾನೆ ಎಂದು ತಿಳಿಸಿದ್ದಾರೆ.