ಬೆಂಗಳೂರು: ಕರ್ನಾಟಕದ ಜೀವ ವೈವಿಧ್ಯತೆ ಆಧರಿಸಿ ಚಿತ್ರೀಕರಿಸಿರುವ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಸೆ. 6ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ರವೀಂದ್ರ ಎನ್. ರೆಡ್ಕರ್ ಹಾಗೂ ಬೆಂಗಳೂರಿನ ಆರ್.ಕೆ ಉಲ್ಲಾಸ್ ಕುಮಾರ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿ ಪರಿಶೀಲಿಸಿದ ಪೀಠ, ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಯಾವ ವಿಷಯ ಆಧರಿಸಿ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು, ಕರ್ನಾಟಕ ಅರಣ್ಯ ಸಂಪತ್ತಿನ ವೈವಿಧ್ಯತೆ ಕುರಿತು ನಿರ್ಮಿಸಲಾಗಿದೆ ಎಂದರು. ಹಾಗಾದರೆ ಕರ್ನಾಟಕ ಅರಣ್ಯ ವೈವಿಧ್ಯತೆ ಇಡೀ ಜಗತ್ತಿಗೆ ತಿಳಿಯಲಿ ಬಿಡಿ ಎಂದಿತು. ಇದಕ್ಕೆ ಉತ್ತರಿಸಿದ ಅರ್ಜಿದಾರ ವಕೀಲರು, ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಅರಣ್ಯ ಇಲಾಖೆಯನ್ನು ನಾವು ಯಾವುದೇ ರೀತಿ ತಡೆಯುತ್ತಿಲ್ಲ ಎಂದರು. ಪೀಠ ಪ್ರತಿಕ್ರಿಯಿಸಿ, ಮತ್ತೇಕೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿತು.
ಅರ್ಜಿದಾರರ ವಕೀಲರು ಉತ್ತರಿಸಿ, ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಅರ್ಜಿಯಲ್ಲಿ ಖಾಸಗಿ ಪ್ರತಿವಾದಿಗಳಾದ ಚಿತ್ರದ ಸಹ ನಿರ್ಮಾಪಕರು ಅರಣ್ಯ ಇಲಾಖೆಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಚಿತ್ರ ಪ್ರದರ್ಶನದ ಹಕ್ಕು ಕೇವಲ ಅರಣ್ಯ ಇಲಾಖೆಗಿದೆ. ಹಾಗೆಯೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ಪ್ರದರ್ಶನ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಹಾಗಿದ್ದೂ ಚಿತ್ರದ ಸಹ ನಿರ್ಮಾಪಕರು ಸಾಕ್ಷ್ಯಚಿತ್ರವನ್ನು ವಿದೇಶಿ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಆದಾಯವನ್ನೂ ಅರಣ್ಯ ಇಲಾಖೆ ಜೊತೆ ಹಂಚಿಕೆ ಮಾಡಿಕೊಂಡಿಲ್ಲ. ಹೀಗಾಗಿ ಸಹ ನಿರ್ಮಾಪಕರು ಚಿತ್ರ ಪ್ರದರ್ಶಿಸುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.
ಅಲ್ಲದೇ, ಅರ್ಜಿಗೆ ಈವರೆಗೂ ಅರಣ್ಯ ಇಲಾಖೆ ಆಕ್ಷೇಪಣೆಯನ್ನೇ ಸಲ್ಲಿಸಿಲ್ಲ ಎಂದರು. ಇದನ್ನು ಪರಿಗಣಿಸಿದ ಪೀಠವು ಸೆ.6ರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶಿಸಿತು. ಜೊತೆಗೆ ಅಲ್ಲಿಯವರೆಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶ ಹೊರಡಿಸಿತು.
ಇದನ್ನೂ ಓದಿ: Paralympics: ಭಾರತಕ್ಕೆ ಮತ್ತೊಂದು ಪದಕ ಖಚಿತ.. ಪ್ರಮೋದ್ ಭಗತ್ Badminton ಫೈನಲ್ ಪ್ರವೇಶ