ಬೆಂಗಳೂರು: ದಾಂಡೇಲಿ ಅರಣ್ಯ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಮರ ಕಡಿಯುವುದಕ್ಕೆ ನಿರ್ಧಾರ ಮಾಡಿದ್ದ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾಗೆ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ರಾಜ್ಯದಲ್ಲಿ ರಸ್ತೆ ಅಗಲೀಕರಣ, ರಸ್ತೆ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಮರಗಳಿಗೆ ಕೊಡಲಿ ಬೀಳುವ ಪ್ರಸಂಗಗಳು ಎದುರಾದಾಗ ಪರಿಸರ ಪ್ರೇಮಿಗಳು ಪ್ರತಿಭಟನೆ ಅಥವಾ ಕೋರ್ಟ್ ಮೊರೆ ಹೋಗುವ ಮೂಲಕ ಪರಿಸರ ಉಳಿಸುವ ಪ್ರಯತ್ನ ಮಾಡುತ್ತಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿ 4ಎ ಗಾಗಿ ಸಾವಿರಾರು ಮರ ಕಡಿಯುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಹಿನ್ನೆಲೆ ದಾಂಡೇಲಿ ಅರಣ್ಯದಲ್ಲಿ ಮರ ಕಡಿಯುವುದನ್ನು ಪ್ರಶ್ನಿಸಿ ಪರಿಸರ ಪ್ರೇಮಿ ಮತ್ತು ಹೋರಾಟಗಾರರಾದ ಸುರೇಶ್ ಹೆಬ್ಳೀಕರ್ ಹಾಗೂ ಜೋಸೆಫ್ ಹೂವರ್ ಪಿಐಎಲ್ ಸಲ್ಲಿಸಿದ್ದು, ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ ಹೆದ್ದಾರಿಗಾಗಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರಿದೆ.
ಸದ್ಯ ಮರಗಳನ್ನು ಕಡಿಯದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅರಣ್ಯ ಕಾಯ್ದೆಯಡಿ ಅನುಮತಿ ಪಡೆಯದೇ ಎನ್‌ಹೆಚ್‌ಎಐ 12 ಸಾವಿರಕ್ಕೂ ಹೆಚ್ಚು ಮರ ಕಡಿದಿರುವುದು ಸಿಜೆಗೆ ಅಚ್ಚರಿ ಮೂಡಿಸಿದೆ. ಈ ಹಿನ್ನೆಲೆ ಫೆ.19ರ ನಂತರ ಮರ ಕಡಿದಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಎನ್‌ಹೆಚ್‌ಎಐಗೆ ಸೂಚಿಸಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ.