ಬೆಂಗಳೂರು : ನಗರದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಕಂಪೆನಿ ವಿರುದ್ಧ ನೀಡಿದ್ದ ನೋಟಿಸ್ಗೆ ತಡೆಯಾಜ್ಞೆ ನೀಡಿದ್ದರೂ 21,000 ಕೋಟಿ ಪಾವತಿಸುವಂತೆ ಕಂಪೆನಿಗೆ ಸರಕು ಮತ್ತು ಸೇವಾ ತೆರಿಗೆ ದಳ (ಡಿಜಿಜಿಐ) ಜಾರಿ ಮಾಡಿದ್ದ ಶೋಕಾಸ್ ನೋಟಿಸ್‌ನ್ನು ಹೈಕೋರ್ಟ್ ರದ್ದು ಮಾಡಿ ಆದೇಶಿಸಿದೆ.
ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ಪೃಥ್ವಿ ರಾಜ್‌ಸಿಂಗ್ ಮತ್ತು ವಿಕಾಸ್ ತನೇಜಾ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ರಮೇಶ್ ಬಾಬು ಅವರು ಈ ಬಗ್ಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಗಳನ್ನು ವಜಾಗೊಳಿಸಿದೆ. ಜತೆಗೆ, ನಾಲ್ಕು ಮನವಿಗಳನ್ನು ಪುರಸ್ಕರಿಸಿದೆ. ಜೊತೆಗೆ ಶೋಕಾಸ್ ನೋಟಿಸ್ ಅನ್ನು ವಜಾ ಮಾಡಲಾಗಿದೆ. ಹಿಂದೆ ಸಲ್ಲಿಸಿದ್ದ ಎರಡು ಅರ್ಜಿಗಳು ಮಾನ್ಯತೆ ಕಳೆದುಕೊಂಡಿರುವುದರಿಂದ ಅವುಗಳನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಗೇಮ್ಸ್ ಕ್ರಾಫ್ಟ್‌ಗೆ 21,000 ಕೋಟಿ ರೂ. ತೆರಿಗೆ ಪಾವತಿಸುವಂತೆ ಜಿಎಸ್‌ಟಿ ಪ್ರಾಧಿಕಾರವು 2022ರ ಸೆಪ್ಟೆಂಬರ್ 8 ರಂದು ನೋಟಿಸ್ ಜಾರಿ ಮಾಡಿತ್ತು. ಇದನ್ನು ಕಂಪೆನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಡಿಜಿಜಿಐ ಮತ್ತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಆಕ್ಷೇಪಿಸಿ ಮತ್ತೆ ಕಂಪೆನಿಯು ಹೈಕೋರ್ಟ್ ಕದತಟ್ಟಿತ್ತು. ಇದರ ವಿಸ್ತೃತ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಈ ಆದೇಶ ನೀಡಿದೆ. ಆದೇಶದ ಅಂತಿಮ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಅರ್ಜಿಯಲ್ಲಿ ಏನಿತ್ತು ? : ಕಂಪೆನಿಗೆ ಸರಕು ಮತ್ತು ಸೇವಾ ತೆರಿಗೆ ದಳ ಈಗಾಗಲೇ ನೀಡಲಾಗಿದ್ದ ನೋಟಿಸ್‌ನಲ್ಲಿ ಅಂಶಗಳನ್ನೇ ಉಲ್ಲೇಖಿಸಿ ಮತ್ತೊಮ್ಮೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಕಳೆದ ಮೂರು ವರ್ಷಗಳಿಂದ ಆನ್‌ಲೈನ್ ಗೇಮ್‌ಗಳಿಗೆ ತೆರಿಗೆ ವಿಧಿಸುವ ವಿಚಾರವು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪರಿಗಣನೆಗೆ ಬಾಕಿ ಇದೆ. ಅದಾಗ್ಯೂ, ಕಂಪೆನಿಗೆ ಶೇ. 28ರಷ್ಟು ತೆರಿಗೆ ವಿಧಿಸುವ ಮೂಲಕ ಡಿಜಿಜಿಐ ಪ್ರಮಾದ ಎಸಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು. 2021ರ ನವೆಂಬರ್‌ನಲ್ಲಿ ಗೇಮ್ಸ್ ಕ್ರಾಫ್ಟ್ ಕಚೇರಿಯ ಮೇಲೆ ಜಿಎಸ್‌ಟಿ ಪ್ರಾಧಿಕಾರ ದಾಳಿ ನಡೆಸಿತ್ತು. ಆ ಬಳಿಕ ಕಂಪೆನಿಯ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿತ್ತು. ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು.
ಇದನ್ನೂ ಓದಿ : ಸೌಹಾರ್ದ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ವಶಕ್ಕೆ ಕೇಳಲು ಅವಕಾಶವಿಲ್ಲ: ಹೈಕೋರ್ಟ್