ಬೆಂಗಳೂರು: ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧದ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಣ್ಣು ಮುಚ್ಚಿಕೊಂಡು ಆರೋಪ ಪಟ್ಟಿಯನ್ನು ಅಂಗೀಕರಿಸಿದೆ ಎಂದು ನ್ಯಾಯಪೀಠ ತಿಳಿಸಿದೆ. ಈ ಆದೇಶದಿಂದ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಮತ್ತು ದಂಡ ರದ್ದಾಂತಾಗಿದೆ.
ತನ್ನ ವಿರುದ್ಧದ ಶಿಕ್ಷೆ ರದ್ದುಪಡಿಸುವಂತೆ ಕೋರಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ. ರಾಮಕೃಷ್ಣ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ, ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯ ಆರೋಪಿಯ ವಿರುದ್ಧ ಒಪ್ಪಬಹುದಾದಂತಹ ದಾಖಲೆಗಳನ್ನು ಪರಿಗಣಿಸಿಲ್ಲ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಗಣಿಸಿ ಆದೇಶವನ್ನು ನೀಡಿದೆ.
ಜತೆಗೆ, ತನಿಖಾಧಿಕಾರಿಗಳು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಪತ್ನಿಯ ವ್ಯವಹಾರ ನಡೆಸುತ್ತಿದ್ದು, ಪ್ರತ್ಯೇಕವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ. ಈ ವ್ಯವಹಾರದಿಂದ ಬಂದ ಆದಾಯವನ್ನು ಅರ್ಜಿದಾರರ ಅಕ್ರಮ ಸಂಪಾದನೆ ಎಂಬುದಾಗಿ ಪರಿಗಣಿಸಿದೆ. ಅಷ್ಟೇ ಅಲ್ಲದೆ, ಇನ್ಸ್‌ಪೆಕ್ಟರ್ ಅವರ ಹೂಡಿಕೆ ಮತ್ತು ವೆಚ್ಚಗಳನ್ನು ತಪ್ಪಾಗಿ ಲೆಕ್ಕಾಚಾರ ಮಾಡಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಈ ನಡುವೆ ಆರೋಪಿಯನ್ನು ಇಲಾಖಾವಾರು ತನಿಖೆಯಲ್ಲಿ ನಿರಪರಾಧಿ ಎಂಬುದಾಗಿ ತಿಳಿಸಲಾಗಿದೆ. ಅಲ್ಲದೆ, ದಾಖಲೆಗಳನ್ನು ಮರು ಪರಿಶೀಲಿಸಿ ನ್ಯಾಯಪೀಠ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಅರ್ಜಿದಾರ ಇನ್ಸ್‌ಪೆಕ್ಟರ್ ಆದಾಯ 31.35 ಲಕ್ಷ ಇತ್ತು. ಆದರೆ, ತನಿಖಾಧಿಕಾರಿಗಳು ಕೇವಲ 20.81 ಎಂಬುದಾಗಿ ಪರಿಗಣಿಸಿದ್ದು, 10.5 ಲಕ್ಷ ರೂ.ಗಳನ್ನು ಹೆಚ್ಚುವರಿ ಆದಾಯ ಎಂಬುದಾಗಿ ಪರಿಗಣಿಸಲಾಗಿದೆ ಎಂದು ಪೀಠ ಹೇಳಿದೆ.
ಏನಿದು ಪ್ರಕರಣ ?: 1996 ರಿಂದ 2008ರ ವರೆಗಿನ ಅವಧಿಯಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಸುತ್ತಿದ್ದ ವೇಳೆ ಲೊಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ತನಿಖೆ ನಡೆಸಿ 2009-10ರಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ 2019ರಲ್ಲಿ ಅರ್ಜಿದಾರರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಆರೋಪಿ ಎಂದು ಪರಿಗಣಿಸಲಾಗಿತ್ತು. ಅಲ್ಲದೆ, ನಾಲ್ಕು ವರ್ಷ ಶಿಕ್ಷೆ ಮತ್ತು 30 ಲಕ್ಷ ರೂ.ಗಳ ದಂಡವನ್ನು ವಿಧಿಸಿತ್ತು.
ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ: ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ