ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಮಾ. 11ರಂದು ಹೊರಡಿಸಿರುವ ಅಧಿಸೂಚನೆ ಸಂಬಂಧ ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ನಿರ್ದೇಶನದಿಂದಾಗಿ ಚುನಾವಣೆ ನಡೆದು ಕಳೆದ 17 ತಿಂಗಳಿಂದ ನನೆಗುದಿಗೆ ಬಿದ್ದಿರುವ 58 ನಗರಸಭೆ, 117 ಪುರಸಭೆ ಹಾಗೂ 93 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 268 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬವಾಗಲಿದೆ.
ಹೊಸ ಅಧಿಸೂಚನೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಎಸ್ಟಿ (ಮಹಿಳೆ) ಕೆಟಗರಿಗೆ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ನಗರಸಭೆ ಸದಸ್ಯ ಆಲಂ ಬಾಷಾ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಪಿ.ಬಿ.ಭಜಂತ್ರಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಸಿಂಧನೂರು ನಗರಸಭೆಯ ಅಧ್ಯಕ್ಷ ಹುದ್ದೆಯ ಮೀಸಲಾತಿ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆ ಸಂಬಂಧ ಸದ್ಯಕ್ಕೆ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಏ. 1ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಪ್ರತಿವಾದಿಗಳಾದ ನಗರಾಭಿವದ್ಧಿ ಇಲಾಖೆ, ರಾಯಚೂರು ಜಿಲ್ಲಾಧಿಕಾರಿ, ಸಿಂಧನೂರು ಉಪ ವಿಭಾಧಿಕಾರಿ, ನಗರಸಭೆ ಸಿಇಒ ಸೇರಿದಂತೆ ಹಲವರಿಗೆ ನೋಟಿಸ್ ಜಾರಿಗೊಳಿಸಿತು.
ಪ್ರಕರಣದ ಹಿನ್ನೆಲೆ:
2018ರ ಸೆ. 3ರಂದು ಹೊರಡಿಸಿದ್ದ ಮೂಲ ಅಧಿಸೂಚನೆಯಲ್ಲಿ ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್ಟಿ (ಮಹಿಳೆ) ಕೆಟಗರಿಗೆ ಮೀಸಲಿಡಲಾಗಿತ್ತು. ಆದರೆ, ಆ ಮೂಲ ಅಧಿಸೂಚನೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಈಗ ಹೊಸದಾಗಿ ಮಾ. 11ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಪುನಃ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಮಹಿಳೆ ಎಂದು ಮೀಸಲು ನಿಗದಿಪಡಿಸಲಾಗಿದೆ. 2011ರ ಜನಸಂಖ್ಯೆ ಹಾಗೂ ಮೀಸಲಾತಿ ಆವರ್ತನದ ಲೆಕ್ಕಚಾರದಲ್ಲಿ ದಾಂಡೇಲಿ, ಗದಗ, ತಿಪಟೂರು ಮತ್ತು ಇಳಕಲ್ ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು ಆಗಬೇಕಿತ್ತು. ಅದರ ಬದಲಿಗೆ ಸಿಂಧನೂರು ನಗರಸಭೆಗೆ ಮಾತ್ರ ಎಸ್ಟಿ ಮಹಿಳೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ ದಾಂಡೇಲಿ, ಗದಗ, ತಿಪಟೂರು ಹಾಗೂ ಇಳಕಲ್ ನಗರಸಭೆಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.