ಬೆಂಗಳೂರು: ಧಾರವಾಡ ಹಾಗೂ ಕಲಬುರಗಿಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ವಕೀಲ ಎನ್.ಪಿ.ಅಮೃತೇಶ್ 2014 ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಎರಡು ಪೀಠಗಳನ್ನು ರಚನೆ ಮಾಡಿರುವುದರಿಂದ ಬಡ ಕ್ಷಕಿದಾರರಿಗೆ ತ್ವರಿತ ನ್ಯಾಯದಾನ ಸಿಗುತ್ತಿದೆ. ವ್ಯಾಜ್ಯ ವೆಚ್ಚ ತಗ್ಗುವ ಜತೆಗೆ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿನ ಉದ್ದೇಶ ಈಡೇರಿದೆ ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರಿಗೆ ದಂಡದಿಂದ ವಿನಾಯಿತಿ: ಅರ್ಜಿದಾರರಿಗೆ ದಂಡ ವಿಧಿಸಲು ನ್ಯಾಯಾಲಯ ಬಯಸಿತ್ತು. ಆದರೆ, ಅವರಿಗೆ 62 ವರ್ಷ ವಯಸ್ಸಾಗಿದ್ದು, ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ. ಈ ಹಿಂದೆ ಕೆಲವು ನೈಜ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿರುವುದನ್ನು ಪರಿಗಣಿಸಿ, ದಂಡದಿಂದ ವಿನಾಯಿತಿ ನೀಡಲಾಗಿದೆ. ಆದರೆ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಸಮಾಜದಲ್ಲಿ ಸ್ಥಳೀಯವಾಗಿ ನ್ಯಾಯ ಲಭ್ಯವಾಗದೇ ಇದ್ದಾಗ ಜನರು ಅಂತಿಮವಾಗಿ ನ್ಯಾಯಾಲಯವೆಂಬ ದೇಗುಲಕ್ಕೆ ಆಗಮಿಸುತ್ತಾರೆ. ಈ ದೇವಾಲಯವನ್ನು ಜಾತಿ, ಧರ್ಮ, ಲಿಂಗ ಅಥವಾ ಜನ್ಮಸ್ಥಳ ಯಾವುದೇ ಬೇಧ ಭಾವ ಇಲ್ಲದೆ ಪೂಜಿಸುತ್ತಿದ್ದಾರೆ. ಧಾರವಾಡ ಹಾಗೂ ಕಲಬುರಗಿ ಪೀಠಗಳ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯ ದೊರಕುತ್ತಿದೆ. ಯುವ ವಕೀಲರಿಗೆ ಉದ್ಯೋಗಾವಕಾಶ ದೊರಕುತ್ತಿದೆ. ಆ ಮೂಲಕ ನ್ಯಾಯದಾನ ವ್ಯವಸ್ಥೆಯ ಉದ್ದೇಶ ಈಡೇರಿದೆ.
ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆಯಂತೆ ಹೈಕೋರ್ಟ್ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಅಂದಿನ ಮುಖ್ಯನ್ಯಾಯಮೂರ್ತಿ 7 ಜನರ ಸಮಿತಿ ರಚಿಸಿತ್ತು. ಈ ಸಮಿತಿ ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಪೀಠಗಳ ಸ್ಥಾಪನೆಗೆ ಶಿಫಾರಸು ಮಾಡಿತ್ತು. ಅದರಂತೆ ಮೊದಲು ಸಂಚಾರಿ ಪೀಠಗಳನ್ನು ಸ್ಥಾಪಿಸಿ ಬಳಿಕ ಕಾಯಂ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ.
ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯಾಲಯ ಬಂದ ಪರಿಣಾಮ ಆ ಭಾಗದ ಜನರಲ್ಲಿ ಕಾನೂನು ಬಗ್ಗೆ ಅರಿವು ಹೆಚ್ಚಾಗಿದೆ. ಕೋರ್ಟ್ ಕದ ತಟ್ಟುವ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಾತ್ಮಕ ನ್ಯಾಯ ದೊರಕುತ್ತಿದೆ. ಜನರಲ್ಲಿ ನ್ಯಾಯಾಂಗದ ಮೆಟ್ಟಿಲೇರುವ ವಿಶ್ವಾಸ ವೃದ್ಧಿಯಾಗಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.
84 ಸಾವಿರ ಪ್ರಕರಣಗಳು ಬಾಕಿ: 2008 ರಲ್ಲಿ ಧಾರವಾಡ ಮತ್ತು ಕಲಬುರಗಿ ಪೀಠಗಳು ಸ್ಥಾಪನೆಯಾದ ನಂತರ ಈವರೆಗೆ ಕ್ರಮವಾಗಿ 20,766 ಮತ್ತು 25,606 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 2023 ರ ಫೆ.28ರ ವರೆಗಿನ ಅಂಕಿಅಂಶಗಳಂತೆ ಎರಡೂ ಪೀಠಗಳಲ್ಲಿ ಕ್ರಮವಾಗಿ 58,586 ಮತ್ತು 25,606 ಪ್ರಕರಣಗಳು ಸೇರಿ ಒಟ್ಟು 84 ಸಾವಿರ ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಪೀಠ ಮಾಹಿತಿ ನೀಡಿದೆ.
ಇದನ್ನೂಓದಿ: ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ: ಸಂತ್ರಸ್ತೆಯನ್ನು ಮನೆಗೆ ಬಿಟ್ಟು ಹೋಗಿದ್ದ ಆರೋಪಿಯ ವಿರುದ್ಧದ ಪ್ರಕರಣ ರದ್ದು