ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ 1203 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.
ಹೈ-ಕರ್ನಾಟಕ ಭಾಗದ ಅಭ್ಯರ್ಥಿಗಳು ಗರಿಷ್ಠ ಅಂಕ ಪಡೆದರೆ ಅವರುಗಳನ್ನು ಅನುಚ್ಛೇದ 371(ಜೆ)ಅಡಿ ಬರುವ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಮಾಡಬೇಕು. ಆದರೆ, ಅವರುಗಳನ್ನು ನಾನ್ ಹೈ-ಕ ಮೀಸಲಾತಿಯಲ್ಲಿ ಸೇರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ 1203 ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.
ಈ ಕುರಿತು ಕೆ ಆರ್ ಯೋಗೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರು ವಾದಿಸಿ, ಹೈ-ಕರ್ನಾಟಕ ಭಾಗದ ಅಭ್ಯರ್ಥಿಗಳು ಗರಿಷ್ಠ ಅಂಕ ಪಡೆದರೆ ಅವರುಗಳನ್ನು ಅನುಚ್ಛೇದ 371(ಜೆ)ಅಡಿ ಬರುವ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಮಾಡಬೇಕು. ಆದರೆ, ಅವರುಗಳನ್ನು ನಾನ್ ಹೈ-ಕ ಮೀಸಲಾತಿಯಲ್ಲಿ ಸೇರಿಸಿದ್ದಾರೆ. ಇದರಿಂದ, ಉಳಿದ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು 1203 ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.