ಬೆಂಗಳೂರು: ಮಹಾದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ 2018 ಹಾಗೂ ಜಾರಿ ನಿರ್ದೇಶನಾಲಯದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ಖಂಡಿಸಿ 2019ರಲ್ಲಿ ನಡೆದ ಪ್ರತ್ಯೇಕ ಬಂದ್‌ಗಳಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿದ್ದರ ಬಗ್ಗೆ ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕೊನೆಯ ಅವಕಾಶ ನೀಡಿದೆ.
ಬಂದ್ ಕರೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ, ಅರ್ಜಿಗಳ ಸಂಬಂಧ 2020ರ ಫೆ.25ರಂದು ನೀಡಿರುವ ನಿರ್ದೇಶನಗಳನ್ನು ಪಾಲಿಸಿರುವ ಬಗ್ಗೆ ಮೂರು ವಾರಗಳಲ್ಲಿ ವರದಿ ಸಲ್ಲಿಸಬೇಕು. ಇದಕ್ಕಾಗಿ ಮತ್ತೆ ಸಮಯ ಕೊಡುವುದಿಲ್ಲ ಎಂದು ತಾಕೀತು ಮಾಡಿ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಎರಡೂ ಬಂದ್‌ಗಳ ವೇಳೆ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಪ್ರಮಾಣ ಅಂದಾಜಿಸಲು ಪ್ರತ್ಯೇಕ ಕ್ಲೇಮ್ ಕಮಿಷನರ್‌ಗಳನ್ನು ನೇಮಕ ಮಾಡಲಾಗಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಬಂದ್, ಪ್ರತಿಭಟನೆಯಿಂದ ಉಂಟಾದ ನಷ್ಟವನ್ನು ಅಂದಾಜಿಸಲು ನೇಮಿಸಿರುವ ಕ್ಲೇಮ್ ಕಮಿಷನರ್ ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಚೇರಿ ಹಾಗೂ ಇತರ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಮತ್ತೊಂದು ಬಂದ್‌ಗೆ ಸಂಬಂಧಿಸಿದಂತೆಯೂ ಕ್ಲೇಮ್ ಕಮಿಷನರ್ ನೇಮಕವಾಗಿದೆ. ಸಮಗ್ರ ವರದಿ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಕೋರಿದರು.
ಇದನ್ನೂ ಓದಿ: ಮಂಡ್ಯ: ದೇವಸ್ಥಾನದಲ್ಲಿ ಕುಸಿದುಬಿದ್ದು 8 ತಿಂಗಳ ಗರ್ಭಿಣಿ ಸಾವು
ಕ್ಲೇಮ್ ಕಮಿಷನರ್ ನೇಮಕ ಸೇರಿದಂತೆ 12ಕ್ಕೂ ಹೆಚ್ಚು ನಿರ್ದೇಶನ ನೀಡಲಾಗಿತ್ತು. ಕ್ಲೇಮ್ ಕಮಿಷನರ್ ನೇಮಕದ ಬಗ್ಗೆಯಷ್ಟೇ ಹೇಳಲಾಗಿದೆ. ಉಳಿದ ನಿರ್ದೇಶನಗಳನ್ನು ಪಾಲಿಸಿದ ವರದಿ ಸಲ್ಲಿಸಿ ಎಂದು ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತು.