ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಕೀಲರ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಿ ಅದನ್ನು ನ್ಯಾಯಾಂಗ ಇಲಾಖೆಗೆ ಯಾವಾಗ ಹಸ್ತಾಂತರಿಸಲಾಗುತ್ತದೆ ಎಂಬ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತು ಸಾಗರ ವಕೀಲರ ಸಂಘ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಲೋಕೋಪಯೋಗಿ ಇಲಾಖೆ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈ 21 ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಾದಿಸಿದ ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗಡೆ, ಸಾಗರ ಕೋರ್ಟ್ ಗೆ ಹೊಂದಿಕೊಂಡಂತೆ ಇರುವ ಪೊಲೀಸ್ ವಸತಿ ಗೃಹಗಳು ಸದ್ಯ ಪಾಳುಬಿದ್ದಿದೆ. ಹೀಗಾಗಿ ಅಲ್ಲಿನ 118x85 ಅಳತೆಯ ನಿವೇಶನವನ್ನು ಸಾಗರ ವಕೀಲರ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕೋರಲಾಗಿದೆ. ಈ ಸಂಬಂಧ ಐದು ವರ್ಷಗಳಿಂದ ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ನಡುವೆ ಪತ್ರ ವ್ಯವಹಾರ ನಡೆಯುತ್ತಿದೆ. ಜಾಗ ಮಂಜೂರು ಮಾಡಬಹುದು ಎಂದು ಶಿವಮೊಗ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಆ ನಿವೇಶನವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಲು ಜಾಗದ ಮೌಲ್ಯವಾಗಿ ಒಂದು ಕೋಟಿ ರೂಪಾಯಿ ನೀಡುವಂತೆ ಲೋಕೋಪಯೋಗಿ ಇಲಾಖೆ ಹೇಳಿದೆ.
ಸಾಗರ ವಕೀಲರ ಸಂಘಕ್ಕೆ 100 ವರ್ಷ ಇತಿಹಾಸವಿದೆ. ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ಎರಡೂ ಬೇರೆ ಬೇರೆಯಲ್ಲ. ವಕೀಲರ ಭವನ ನ್ಯಾಯಾಲಯದ ಅವಿಭಾಜ್ಯ ಅಂಗ. ವಕೀಲರ ಭವನ ನಿರ್ಮಾಣ ಮಾಡುವುದು ಸರ್ಕಾರದ ಕರ್ತವ್ಯ. ಅದಕ್ಕೆ ಒಂದು ಕೋಟಿ ಹಣ ಕೇಳುತ್ತಿರುವುದು ಸರಿಯಲ್ಲ. ಹಾಗಾಗಿ ಕೂಡಲೇ ಜಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಿ, ಸರ್ಕಾರದ ವೆಚ್ಚದಲ್ಲಿ ವಕೀಲರ ಭವನ ನಿರ್ಮಿಸಿ ಕೊಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.