ಬೆಂಗಳೂರು : ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಪೊಲೀಸರು ಬಾಡಿ ಕ್ಯಾಮರಾ ಧರಿಸುವಂತೆ ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪೊಲೀಸರು ಬಾಡಿ ಕ್ಯಾಮರಾ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಮೆರಾ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ಹೊರಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿವರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಕೋರಿಕೆ ಪರಿಗಣಿಸಿದ ಪೀಠ, ಈ ಕುರಿತು ಕೈಗೊಂಡಿರುವ ಕ್ರಮಗಳ ವಿವರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
![Body camera for traffic police, High court ask to Government, Bengaluru high court news, Karnataka high court news, ಟ್ರಾಫಿಕ್ ಪೊಲೀಸರಿಗೆ ಬಾಡಿ ಕ್ಯಾಮೆರಾ, ಸರ್ಕಾರಕ್ಕೆ ವಿವರ ಕೇಳಿದ ಹೈಕೋರ್ಟ್, ಬೆಂಗಳೂರು ಹೈಕೋರ್ಟ್ ಸುದ್ದಿ, ಕರ್ನಾಟಕ ಹೈಕೋರ್ಟ್ ಸುದ್ದಿ,](https://etvbharatimages.akamaized.net/etvbharat/prod-images/kn-bng-03-hc-bodycamera-7208962_22122021195253_2212f_1640182973_1003.jpg)
ಅರ್ಜಿದಾರರ ಕೋರಿಕೆ: ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸ್ ಸಿಬ್ಬಂದಿ ಮಾಡುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಪೊಲೀಸ್ ಠಾಣೆಯಿಂದಲೇ ಹಿರಿಯ ಅಧಿಕಾರಿಗಳು ಗಮನಿಸಿ ಮೇಲ್ವಿಚಾರಣೆ ನಡೆಸಬಹುದು.
ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಪ್ರಶ್ನಿಸಿದ ಪೊಲೀಸರ ಮೇಲೆ ತಪ್ಪಿತಸ್ಥರೇ ತಿರುಗಿಬಿದ್ದಿರುವ ಘಟನೆಗಳು ಸಾಕಷ್ಟಿವೆ. ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರಿಗೆ ರಕ್ಷಣೆ ಸಿಗಲಿದೆ. ತಪ್ಪಿತಸ್ಥರಿಗೂ ಭಯ ಹುಟ್ಟಿಸುತ್ತದೆ.
ಅಲ್ಲದೆ ಬೆಂಗಳೂರು ನಗರ ಪೊಲೀಸರಿಗಾಗಿ ಈಗಾಗಲೇ ಖರೀದಿಸಿರುವ 50 ಬಾಡಿ ಕ್ಯಾಮರಾಗಳನ್ನು ಬಳಸುವಂತೆ ನಿರ್ದೇಶಿಸಬೇಕು. ರಾಜ್ಯಾದ್ಯಂತ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿ ಕ್ಯಾಮರಾ ಖರೀದಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.