ಬೆಂಗಳೂರು: ಬ್ರಿಟ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ನಿಂದ ಆಯೋಜಿಸುತ್ತಿರುವ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಆಡುವುದಕ್ಕೆ ಒಪ್ಪಿಗೆ ಸೂಚಿಸಿರುವ ಆಟಗಾರರಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ವಿಭಾಗೀಯ ಪೀಠ ನಿರಾಕರಿಸಿತು. ಈ ಆದೇಶದಿಂದ ಇದೇ ಭಾನುವಾರದಿಂದ ನಗರದಲ್ಲಿ ಪ್ರಾರಂಭವಾಗುತ್ತಿರುವ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ಗಿದ್ದ ಆತಂಕ ದೂರವಾಗಿದೆ.
ಬ್ರಿಟ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುತ್ತಿರುವ ಲೀಗ್ನಲ್ಲಿ ಆಟಗಾರರು ಭಾಗಿಯಾಗುವುದನ್ನು ಪ್ರಶ್ನಿಸಿ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್(ಬಿಎಐ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ ಅವರಿದ್ದ ವಿಶೇಷ ಪೀಠ ಮಧ್ಯಪ್ರವೇಶಿಸಿಸಲು ನಿರಾಕರಿಸಿದೆ. ಅಲ್ಲದೆ, ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಏನಿದು ಪ್ರಕರಣ?: ಇದೇ ಭಾನುವಾರ ನಗರದಲ್ಲಿ ಬಿಟ್ಸ್ ಪೋರ್ಟ್ ಪ್ರೈವೇಟ್ ಲಿಮಿಟಿಡ್ ಸಹಯೋಗದಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದು, ಈ ಪಂದ್ಯದಲ್ಲಿ ಆಟಗಾರರು, ತರಬೇತುದಾರರು ಮತ್ತು ತಾಂತ್ರಿಕ ಸಿಬ್ಬಂದಿ ಭಾಗವಹಿಸುವ ಸಂಬಂಧ ಬಿಎಐ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಬಿಎಐ) ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ಪುರಸ್ಕರಿಸಿತ್ತು. ಅಲ್ಲದೆ, ಆಟಗಾರರು ಲೀಗ್ನಲ್ಲಿ ಭಾಗಿಯಾಗುವುದಕ್ಕೆ ಅವಕಾಶ ನೀಡಿ ಆಗಸ್ಟ್ 27ರಂದು ಮಧ್ಯಂತರ ಆದೇಶ ನೀಡಿತ್ತು. ಅಲ್ಲದೆ, ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಆಟಗಾರರು ಭಾಗಿಯಾಗಲು ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಒಪ್ಪಿಗೆ ನೀಡಿರುವ ಆಟಗಾರರು ಭಾಗಿಯಾಗಬಹುದಾಗಿದೆ ಎಂದು ಪೀಠ ತಿಳಿಸಿತ್ತು.
ಪಂದ್ಯಗಳು ಆಗಸ್ಟ್ 27 ಮತ್ತು ಸೆಪ್ಟೆಂಬರ್ 8 ರಂದು ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ಪ್ರತಿ ತಂಡಕ್ಕೆ 10 ಆಟಗಾರರಂತೆ 8 ತಂಡಗಳು ಸಿದ್ಧವಾಗಿದ್ದವು. ಇದರಲ್ಲಿ ಇಬ್ಬರು ಅಂತರರಾಷ್ಟ್ರೀಯ ಆಟಗಾರರಿದ್ದು, ಪ್ರತಿ ತಂಡಕ್ಕೆ ಕನಿಷ್ಠ ಇಬ್ಬರು ಮಹಿಳಾ ಆಟಾಗಾರರು ಇರಬೇಕಾಗಿತ್ತು ಎಂಬುದಾಗಿ ತಿಳಿಸಿದ್ದರು. ಈ ಪಂದ್ಯದಲ್ಲಿ ಆಡುವುದಕ್ಕೆ 54 ಅಂತರರಾಷ್ಟ್ರೀಯ ಆಟಗಾರರೊಂದಿಗೆ ಒಟ್ಟು 457 ಆಟಗಾರರು ಲೀಗ್ನಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ. ಇವರಲ್ಲಿ ಈಗಾಗಲೇ 150 ಆಟಗಾರರು ಆಯ್ಕೆ ಹಂತದಲ್ಲಿದ್ದು, 80 ಮಂದಿ ಅಂತಿಮವಾಗಿ ಆಯ್ಕೆಗೊಂಡಿದ್ದರು. ಅಲ್ಲದೆ, ಆಯ್ಕೆಯಾಗದ ಅಭ್ಯರ್ಥಿಗಳೂ ಸಹ ಶುಲ್ಕ ಪಾವತಿ ಮಾಡಿದ್ದಾರೆ ಎಂದು ಬಿಎಐ ತನ್ನ ಅರ್ಜಿಯಲ್ಲಿ ವಿವರಿಸಿತ್ತು.
ಇದನ್ನೂ ಓದಿ: ಗಂಭೀರ ಪ್ರಕರಣಗಳಲ್ಲಿ ನಿತ್ಯ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ