ಬೆಂಗಳೂರು: ಸಾಲ ಮರುಪಾವತಿ ಮಾಡದ ಸಂಬಂಧ ವಲಸೆ ಇಲಾಖೆ ಅಧಿಕಾರಿಗಳು ಲುಕ್ಔಟ್ ನೋಟಿಸ್ ನೀಡಿದ್ದ ಉದ್ಯಮಿಯೊಬ್ಬರಿಗೆ ಯುಎಇ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ. ಹಿಮಾಯತ್ ಅಲಿ ಖಾನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಿವಿಧ ಹೈಕೋರ್ಟ್ಗಳ ತೀರ್ಪುಳನ್ನು ಪ್ರಸ್ತಾಪಿಸಿ ಅರ್ಜಿದಾರರಿಗೆ ವಿದೇಶಿ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ.
ಅಲ್ಲದೆ, ಅರ್ಜಿದಾರರಿಗೆ ಸ್ವಲ್ಪ ಸಮಯದವರೆಗೆ ಪ್ರಯಾಣಿಸಿ ಮತ್ತೆ ಭಾರತಕ್ಕೆ ಹಿಂದಿರುಗುವುದಾಗಿ ತಿಳಿಸಿದ್ದಾರೆ. ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಅವರ ಕೆಲಸದ ಮುಕ್ತಾಯದ ನಂತರ ರಾಷ್ಟ್ರಕ್ಕೆ ಹಿಂದಿರುಗುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅರ್ಜಿದಾರರು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಮಂಡಳಿಯಲ್ಲಿ ವಸೂಲಾತಿ ಪ್ರಕ್ರಿಯೆಗಳನ್ನು ಹೊರತುಪಡಿಸಿ ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿಲ್ಲ. ಹೀಗಾಗಿ ಅನುಮತಿ ನೀಡುವುದು ಸೂಕ್ತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು ?: ಅಸೋಸಿಯೇಟ್ ಡೆಕೋರ್ ಲಿಮಿಟೆಡ್ ಹೆಸರಿನ ಕಂಪನಿಯು 2007 ರಲ್ಲಿ ಕಂಪನಿಗಳ ಕಾಯಿದೆ, 1956 ರ ಅಡಿಯಲ್ಲಿ ನೋಂದಾಯಿಸಿದೆ. ಕಂಪನಿಯು ಬ್ಯಾಂಕ್ ಆಫ್ ಬರೋಡಾದಿಂದ ರೂ.199 ಕೋಟಿ ಮೌಲ್ಯದ ಆಸ್ತಿಯನ್ನು ಅಡಮಾನವಿಟ್ಟು ಹಣಕಾಸು ಪಡೆದುಕೊಂಡಿತ್ತು. ಅರ್ಜಿದಾರ ಹಿಮಾಯತ್ ಆಲಿ ಖಾನ್ ಅವರು ಕೇವಲ ಈ ಕಂಪೆನಿಯ ಕಾರ್ಯರಹಿತ ನಿರ್ದೇಶಕರಾಗಿದ್ದರು. ಕಂಪನಿಗೆ ಮುಂಗಡವಾಗಿ ನೀಡಿದ ಸಾಲಕ್ಕೆ ಹಲವಾರು ಗ್ಯಾರಂಟಿ ನೀಡಿದ್ದರೂ, ಮರುಪಾವತಿಸಿರಲಿಲ್ಲ. ಆದ ಕಾರಣ ಅರ್ಜಿದಾರರ ವಿರುದ್ಧ ಬ್ಯಾಂಕ್‌ಗಳ ಒಕ್ಕೂಟವು ವಿವಿಧ ಪ್ರಕ್ರಿಯೆಗಳನ್ನು ಪ್ರಾರಂಭಿಸಿತು.
ಅಲ್ಲದೆ, ಬ್ಯಾಂಕ್‌ಗೆ ಪಾವತಿಸಬೇಕಾದ ಮೊತ್ತವನ್ನು ಮರುಪಡೆಯಲು ಕಂಪನಿಯ ವಿರುದ್ಧ ಬ್ಯಾಂಕ್‌ನಿಂದ ಬೆಂಗಳೂರು ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್‌ಟಿ) ಮುಂದೆ ಅಂತಹ ಒಂದು ಕ್ರಮಕ್ಕೆ ಮಂದಾಗಿತ್ತು. ಆದರೆ, ಅರ್ಜಿದಾರರು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರಲಿಲ್ಲ. 2022ರ ಮಾರ್ಚ್ 7 ರಂದು ಬ್ಯಾಂಕ್ ಆಫ್ ಬರೋಡಾ ಲುಕ್ಔಟ್ ಸುತ್ತೋಲೆ ಹೊರಡಿಸಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಕಳೆದ 35 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಮರದ ಉತ್ಪನ್ನಗಳ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರ ಉದ್ದೇಶಗಳಿಗಾಗಿ ಯುಎಇ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಬಯಸಿದ್ದರು. ಆದರೆ ಆ ಸಮಯದಲ್ಲಿ, ಡಿಆರ್‌ಟಿಯ ಮೊದಲು ವಸೂಲಾತಿ ಪ್ರಕ್ರಿಯೆಗಳು ಅರ್ಜಿದಾರರ ವಿರುದ್ಧ ವಿಚಾರಣೆ ಬಾಕಿ ಉಳಿದಿತ್ತು. ಪ್ರಯಾಣಿಸಲು ಅನುಮತಿ ನೀಡಿದರೆ, ಅವರು ಬ್ಯಾಂಕ್‌ನಿಂದ ಸುತ್ತೋಲೆ ಹೊರಡಿಸಲಾಗಿದೆ. ಆದ್ದರಿಂದ ಹೊರ ದೇಶಕ್ಕೆ ಪ್ರವಾಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದರು.
ಅಲ್ಲದೆ, ಅರ್ಜಿದಾರರು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾಕ್ಕೆ ಅಲ್ಪಾವಧಿಗೆ ಪ್ರಯಾಣಿಸಲು ಅವಕಾಶ ನೀಡಬೇಕು. ತಮ್ಮ ಕೆಲಸವನ್ನು ಪೂರ್ಣಗೊಳಿಸಿದ ತಕ್ಷಣ ಭಾರತಕ್ಕೆ ಹಿಂದಿರುಗಲಾಗುವುದು ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ:ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಓಲೇಕಾರ ಸಲ್ಲಿಸಿದ್ದ ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್