ಬೆಂಗಳೂರು: ಲಾಕ್‍ಡೌನ್ ನಿಯಮಗಳನ್ನು ಸಡಿಲಿಸಿದ ಬಳಿಕ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸ್ವಗ್ರಾಮಗಳಿಗೆ ವಾಪಸ್ಸಾಗುತ್ತಿರುವ ವಲಸೆ ಕಾರ್ಮಿಕರಿಂದ ದುಬಾರಿ ಪ್ರಯಾಣ ದರ ಪಡೆಯುತ್ತಿರುವ ಸಾರಿಗೆ ಇಲಾಖೆಯ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ತುಮಕೂರು ಮೂಲದ ವಕೀಲ ಎಲ್. ರಮೇಶ್ ನಾಯಕ್ ಅವರು ಹೈಕೋರ್ಟ್‍ಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿದ ಬಳಿಕ ನಗರ ಪ್ರದೇಶಗಳಿಗೆ ಕೆಲಸ ಅರಸಿ ಬಂದಿದ್ದ ವಲಸೆ ಕಾರ್ಮಿಕರು ಇದ್ದಲ್ಲಿಯೇ ಉಳಿದಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ತಾವು ಗಳಿಸಿದ್ದ ಸಣ್ಣ ಪ್ರಮಾಣದ ದುಡಿಮೆಯನ್ನು ಜೀವನ ನಿರ್ವಹಣೆಗಾಗಿ ಖರ್ಚು ಮಾಡಿಕೊಂಡಿದ್ದಾರೆ. ಇದೀಗ ದುಬಾರಿ ಪ್ರಯಾಣ ದರ ನಿಗದಿ ಮಾಡಿದ್ದು ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಸುರಕ್ಷಿತ ಕಳಿಸಿಕೊಡಲು ಸರ್ಕಾರವೇ ವ್ಯವಸ್ಥೆ ಮಾಡಬೇಕು. ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿರುವ ಸರ್ಕಾರ ದುಬಾರಿ ಪ್ರಯಾಣ ದರ ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ. ಕೈಯಲ್ಲಿ ಕೆಲಸವೂ ಇಲ್ಲದ, ಆದಾಯವೂ ಇಲ್ಲದ ವಲಸೆ ಕಾರ್ಮಿಕರಿಗೆ ದುಬಾರಿ ಪ್ರಯಾಣ ದರ ಪಾವತಿಸಲು ಸಾಧ್ಯವಿಲ್ಲ. ಸಾರಿಗೆ ಇಲಾಖೆಯ ಈ ಕ್ರಮ ಸಂವಿಧಾನ ಮತ್ತು ಕಾನೂನು ಬಾಹಿರ ಎಂದು. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.