ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಹೈಕಮಾಂಡ್ ಬುಲಾವ್ ನೀಡಿದ್ದು, ರಾತ್ರಿಯೇ ವಿಮಾನ ಏರಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಪದೇ ಪದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ದೆಹಲಿಗೆ ಬರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ಆದರೆ ದೆಹಲಿಗೆ ಬರಲು ಎರಡು ದಿನ ಕಾಲಾವಕಾಶವನ್ನು ನೀಡುವಂತೆ ಜೆ.ಪಿ.ನಡ್ಡಾಗೆ ಯತ್ನಾಳ್ ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ನಡ್ಡಾ, ಕೂಡಲೇ ಹೊರಟು ಬರುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು ಎನ್ನಲಾಗಿದೆ. ತುರ್ತಾಗಿ ಬರುವಂತೆ ಸೂಚನೆ ಬಂದ ಹಿನ್ನೆಲೆ ರಾತ್ರಿ 9.30ರ ವಿಮಾನದಲ್ಲಿ ಯತ್ನಾಳ್ ನವದೆಹಲಿಗೆ ಪ್ರಯಾಣ ಬೆಳೆಸಿದರು.
ಓದಿ:ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಪ್ರತಿಕ್ರಿಯೆ
ಹೇಳಿಕೆಯಿಂದಲೇ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದ ಆರೋಪದ ಮೇಲೆ ಸ್ಪಷ್ಟೀಕರಣ ನೀಡುವಂತೆ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ 11 ಪುಟಗಳ ಉತ್ತರವನ್ನೂ ಯತ್ನಾಳ್ ಬರೆದಿದ್ದರು. ಆದರೂ ಇಂದು ಪಂಚಮಸಾಲಿ ಸಮಾವೇಶದಲ್ಲಿ ಮತ್ತೆ ಸಿಎಂ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಹಿನ್ನೆಲೆ ದೆಹಲಿಗೆ ಕರೆಸಿಕೊಳ್ಳಲಾಗಿದೆ ಎನ್ನಲಾಗ್ತಿದೆ.