ಬೆಂಗಳೂರು: ನಮ್ಮ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎನ್ನುವ ಅಪೇಕ್ಷೆ ಎಲ್ಲರಿಗೂ ಇರುತ್ತದೆ. ಆದರೆ ಬಿಜೆಪಿಯಲ್ಲಿ ಯಾವುದೇ ಜಾತಿ ಅಧಾರಿತ ಚರ್ಚೆ ಮಾಡಬಾರದು, ಶಾಸಕರಾದವರಿಗೆ ಜಾತ್ಯಾತೀತ ಮನಸ್ಥಿತಿ ಇರಬೇಕು. ಸಿಎಂ ಸ್ಥಾನದ ವಿಚಾರದಲ್ಲಿ ಅವಶ್ಯಕತೆ, ಸಂದರ್ಭ ಬಂದಾಗ ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಎಲ್ಲ ವರ್ಗಕ್ಕೂ ಅವಕಾಶ ಕೊಡುವ ಮನಸ್ಥಿತಿ ಬಿಜೆಪಿಯಲ್ಲಿ ಇದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ನಿವಾಸದಲ್ಲಿ ಸಭೆ ಆಗಿದೆ. ಆ ಸಭೆಯಲ್ಲಿ ಅನೇಕರು ವಿವಿಧ ಅಭಿಪ್ರಾಯ ಹೇಳಿದ್ದಾರೆ. ಸಭೆಯಲ್ಲಿನ ಅಭಿಪ್ರಾಯಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ, ನಿರ್ಣಯ ಆಗಿಲ್ಲ. ಅವರ ಸಮುದಾಯಕ್ಕೆ ಸಿಎಂ ಹುದ್ದೆ ಕೇಳುವುದು ಅವರ ಅಪೇಕ್ಷೆ, ಅದರಲ್ಲಿ ತಪ್ಪಿಲ್ಲ. ಆದರೆ ಮುಖ್ಯಮಂತ್ರಿ ಹುದ್ದೆ ಯಾವ ಸಮುದಾಯಕ್ಕೆ ಎಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮ ಪಕ್ಷವು ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ನೀಡಲಿದೆ. ವೈಯಕ್ತಿಕ ವಿಚಾರಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲ್ಲ. ಇಂತಹ ವಿಚಾರಗಳನ್ನು ಮಾಧ್ಯಮದ ಮುಂದೆ ಹೇಳಬಾರದು ಎಂಬ ಪಕ್ಷದ ಸೂಚನೆ ಇದೆ ಎಂದರು.
ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ನಡೆದಿದೆ. ಆದರೆ ಅದು ಸಂಘಟನೆ ತೀರ್ಮಾನ ಅಲ್ಲ, ಸಂಘಟನೆಯ ಸೂಚನೆಯೂ ಅಲ್ಲ ಯಾವುದೇ ಸಂಘಟನೆಯ ಕಾರ್ಯಕರ್ತರು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅವರ ಸಮುದಾಯ ರಕ್ಷಣೆ ಮಾಡುವ ದೃಷ್ಟಿಯಲ್ಲಿ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕರು, ಲಿಂಗಾಯತ ಸಮುದಾಯದಲ್ಲಿ ಕೆಲವು ಗೊಂದಲಗಳಾಗಿವೆ, ಲಿಂಗಾಯತರನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ ಅಂತ ಕಾಂಗ್ರೆಸ್ ಬಿಂಬಿಸುತ್ತಿದೆ. ಕಾಂಗ್ರೆಸ್ನ ಲಿಂಗಾಯತ ನಾಯಕರು ಅವರ ಸಮುದಾಯಕ್ಕೆ ಸಿಎಂ ಹುದ್ದೆ ಕೇಳಲಿಲ್ಲ. ಆದರೆ ಬಿಜೆಪಿಯಲ್ಲಿ ವೀರಶೈವ ಸಮಾಜ ಹೆಚ್ಚು ತೊಡಗಿಸಿಕೊಂಡಿದೆ. ಶಾಸಕಾಂಗ ಪಕ್ಷದ ನಿರ್ಧಾರ, ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿ ಸ್ಥಾನದ ನಿರ್ಧಾರ ಆಗುತ್ತದೆ. ಬಿಜೆಪಿಯಲ್ಲಿ ಆಗ್ರಹ ಎಂಬುದು ಇರಲ್ಲ ಬಿಜೆಪಿ ಸಿದ್ಧಾಂತ, ರಾಷ್ಟ್ರೀಯತೆಯ ಸಿದ್ಧಾಂತ ನಮಗೆ ಮುಖ್ಯ ಎಂದು ನಾರಾಯಣಸ್ವಾಮಿ ಹೇಳಿದರು.
ಬಿಜೆಪಿಯಲ್ಲಿ ವೀರಶೈವರು ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಈ ಸಮುದಾಯದ 68 ಮಂದಿಗೆ ಅವಕಾಶ ನೀಡಿ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಹಾಗೆಯೇ ಒಕ್ಕಲಿಗ ಸಮುದಾಯದ 41 ಮಂದಿಗೆ ಅವಕಾಶ ನೀಡಲಾಗಿದೆ. ಈಡಿಗ, ಕುರುಬ, ರೆಡ್ಡಿ, ತಿಗಳ ಸೇರಿದಂತೆ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರ ಮುಂದಿನ ಐದು ವರ್ಷ ಮುಂದುವರೆಯಲು ಈ ಚುನಾವಣೆಯಲ್ಲಿ ಕಾರ್ಯಕರ್ತರು ಹೆಚ್ಚು ತೊಡಗಿಸಿಕೊಳ್ಳಬೇಕು. ಕಾಂಗ್ರೆಸ್ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದು, ಪಕ್ಷದ ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದು ಅವರು ಕರೆ ನೀಡಿದರು.
ಮತಾಂತರಗೊಂಡವರಿಗೆ ಮೀಸಲಾತಿ ಮುಂದುವರೆಸುವ ಕುರಿತಂತೆ ಕೇಂದ್ರ ಸರ್ಕಾರ ಆಯೋಗ ರಚನೆ ಮಾಡಿದೆ. ಆದರೆ, ನಿನ್ನೆ ತಮಿಳುನಾಡು ವಿಧಾನಸಭೆಯಲ್ಲಿ ಮತಾಂತರಗೊಂಡ ಆದಿದ್ರಾವಿಡರಿಗೆ ಮೀಸಲಾತಿ ಮುಂದುವರಿಸುವ ಆತುರದ ನಿರ್ಣಯ ಅಂಗೀಕರಿಸಲಾಗಿದೆ ಎಂದು ಎ.ನಾರಾಯಣಸ್ವಾಮಿ ಹೇಳಿದರು.
ಯಾವ ಮೀಸಲಾತಿ ತೆಗೆಯುತ್ತೀರಿ?: ಚುನಾವಣೆ ವೇಳೆ ಮೀಸಲಾತಿ ರದ್ದುಪಡಿಸುವುದಾಗಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇಕಡ 3ರಿಂದ 7ಕ್ಕೆ, ಪರಿಶಿಷ್ಟ ಜಾತಿಗೆ ಶೇಕಡ 15ರಿಂದ 17ಕ್ಕೆ ಹೆಚ್ಚಿಸಿ ಆದೇಶ ಜಾರಿ ಮಾಡಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ಆದೇಶ ಪಾಲನೆಯಾಗುತ್ತಿದೆ. ಇದೀಗ ಮೀಸಲಾತಿ ತೆಗೆಯುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ವೀರಶೈವರಿಗೆ, ಒಕ್ಕಲಿಗರಿಗೆ ಇಲ್ಲವೇ ಇತರ ಯಾವ ವರ್ಗಕ್ಕೆ ನೀಡಿರುವ ಮೀಸಲಾತಿ ರದ್ದು ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು.