ಬೆಂಗಳೂರು: ಹೇಮಾವತಿ ಜಲಾಶಯದಿಂದ ನೀರನ್ನು ಯಾವ ರೀತಿ ಮತ್ತು ಹೇಗೆ ಹರಿಸಬೇಕೆಂದು ಚರ್ಚೆ ಮಾಡಿದ್ದೇವೆ. ಬೆಳೆಗಳಿಗೆ ನೀರು ಕೊಡುತ್ತೇವೆ. ಕುಡಿಯುವ ನೀರಿಗೆ ಆಯ್ದುಕೊಂಡ ಕೆರೆಗಳಿಗೆ ನೀರು ಹರಿಸುವುದಾಗಿ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಕಾವೇರಿ ನೀರಾವರಿ ನಿಗಮದಡಿಯಲ್ಲಿ ಇಂದು ವಿಕಾಸಸೌಧದಲ್ಲಿ ನಡೆದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಮಾತನಾಡಿದ ಅವರು, ಸದ್ಯಕ್ಕೆ 33 ಟಿಎಂಸಿ ನೀರು ಇದೆ. ಟ್ರಿಬ್ಯುನಲ್ ಮತ್ತು ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ಎಷ್ಟು ಬೇಕು ಅಷ್ಟು ನೀರನ್ನು ಹರಿಸಲಾಗುವುದು. ಮಂಡ್ಯ, ಹಾಸನಕ್ಕೆ ನಿಗದಿಗಿಂತ ಹೆಚ್ಚು ನೀರು ಹರಿಯುತ್ತಿದೆ ಎಂದರು.
ಅಂಚಿನ ಭಾಗಕ್ಕೆ ನೀರು ತಲುಪುತ್ತಿಲ್ಲ. ತುಮಕೂರಿಗೆ 24 ಟಿಎಂಸಿ ನೀರು ಬೇಕು, ಆದ್ರೆ ಅಷ್ಟು ಸಿಗುತ್ತಿಲ್ಲ. ಕೆನಾಲ್ ನಿರ್ವಹಣೆಗೆ ತೊಂದರೆ ಇಲ್ಲ. ಕುಣಿಗಲ್ ಬಳಿ ಕೆನಾಲ್ನಲ್ಲಿ ತೊಂದರೆಯಾಗುತ್ತಿದೆ. ಮುಂದಿನ ವರ್ಷದಲ್ಲಿ ಸರಿಮಾಡುವ ಕಾರ್ಯ ನಡೆಯಲಿದೆ. ಯೂರಿಯಾ ಸಂಗ್ರಹ ಕೂಡ ಇದೆ. ಮಳೆ ಚೆನ್ನಾಗಿದೆ. ಇನ್ನಷ್ಟು ಯೂರಿಯಾ ಬೇಕಾಗುತ್ತದೆ ಎಂದರು.
ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಇದೇ ತಿಂಗಳ ಮೂರರಿಂದ ಹೇಮಾವತಿ ಜಲಾಶಯದಿಂದ ನೀರನ್ನು ಹರಿಬಿಡಲಾಗುತ್ತಿದೆ. ನೀರು ಹರಿಸಲು ಇವತ್ತಿನ ಸಭೆ ಒಪ್ಪಿದೆ ಎಂದು ಹೇಳಿದರು. ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಬಲದಂಡೆ ನಾಲೆಗೆ ಮುಂದಿನ ಸೋಮವಾರದಿಂದ ನೀರು ಬಿಡಲಾಗುವುದು. ಕೃಷಿ ಮತ್ತು ಕುಡಿಯುವ ಸಲುವಾಗಿಯೂ ನೀರು ಹರಿಸಲಾಗುವುದು ಎಂದರು.
ಇದಕ್ಕೂ ಮುನ್ನ ನಡೆದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಬ್ಬಿನ ಬೆಳೆಗೆ ಎರಡು ಬಾರಿ ನೀರು ಹರಿಸುವುದಕ್ಕಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಚಿವರಿಗೆ ಮನವಿ ಮಾಡಿದರು. ಬೆಂಬಲ ಬೆಲೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.