ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎರಡನೇ ಬಾರಿ ಸಿಬಿಐ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಗಂಗಾ ನಗರದಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ಹೇಮಂತ್ ನಿಂಬಾಳ್ಕರ್ಗೆ ಮತ್ತೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಲಾಗಿತ್ತು. ಇದರಂತೆ ಹಾಜರಾಗಿ ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿ ಹೊರ ನಡೆದಿದ್ದಾರೆ.
ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ ಹಗರಣ ಬೆಳಕಿಗೆ ಬರುವ ಮೊದಲೇ ಆ ಸಂಸ್ಥೆ ವಿರುದ್ಧ ಆರ್‌ಬಿಐ ಪ್ರಧಾನ ವ್ಯವಸ್ಥಾಪಕಿ ಕೆ.ಎಸ್.ಜೋಸ್ನಾ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದ ಸಿಐಡಿಯ ಆರ್ಥಿಕ ಅಪರಾಧ ವಿಭಾಗಗಳ ಅಂದಿನ ಐಜಿಪಿ ಹೇಮಂತ್ ನಿಂಬಾಳ್ಕರ್, ಆರೋಪಿತ ಸಂಸ್ಥೆಯ ಪರವಾಗಿ ವರದಿ ನೀಡಿದ್ದರು ಎನ್ನುವ ಆರೋಪವಿದೆ. ತಮ್ಮ ಪರವಾಗಿ ವರದಿ ನೀಡಲು ಪ್ರಮುಖ ಆರೋಪಿ ಮನ್ಸೂರ್ ಖಾನ್‌ನಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ನಡೆಸಿದೆ.